ಬೆಂಗಳೂರು: ಲಾಕ್‌ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವವರಲ್ಲಿ ಕರಕುಶಲ ಕರ್ಮಿಗಳೂ ಇದ್ದು, ಮಾರುಕಟ್ಟೆ ಇಲ್ಲದೇ ತೊಂದರೆಗೆ ಸಿಲುಕಿರುವ ಕುಶಲಕರ್ಮಿಗಳಿಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ 'ಬೆಂಗಳೂರು ಉತ್ಸವ'ಕ್ಕೆ ಚಾಲನೆ ನೀಡಲಾಯಿತು.
ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಗಸ್ಟ್ 15ರ ವರೆಗೆ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಕೊರೊನಾ ಸಾಂಕ್ರಾಮಿಕ ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್ ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಕೆ.ಎಸ್ ಅಪ್ಪಾಜಯ್ಯ ಪಾಲ್ಗೊಂಡಿದ್ದರು.
ಜರಾವ ಹಿಂದೂಸ್ತಾನ್ ಟ್ರೈಬ್ಸ್ ನ ಸಹ ಸಂಸ್ಥಾಪಕ ಹರೀಶ್ ಮಾತನಾಡಿ, ಜರಾವ ಸಂಸ್ಥೆ ಗುಡ್ಡಗಾಡು ಪ್ರದೇಶದ ಟ್ರೈಬಲ್ ಜನರ ಜೊತೆ ಕೆಲಸ ಮಾಡುವ ಎನ್ಜಿಒ. ಬಂಜಾರ, ಲಂಬಾಣಿಯವರ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಅವರು ತಯಾರಿಸುವ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ನೀಡುತ್ತಿದ್ದೇವೆ. ಸ್ಟಾರ್ಸ್, ಸೆಲೆಬ್ರೆಟಿಗಳು ಕೂಡಾ ಹೆಚ್ಚು ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದರು.
ನಟಿ ಭೂಮಿಕಾ ಶೆಟ್ಟಿ ಮಾತನಾಡಿ, ಮೊದಲನೇ ಬಾರಿಗೆ ಬೆಂಗಳೂರು ಉತ್ಸವಕ್ಕೆ ಬಂದಿದ್ದು, ತುಂಬ ಖುಷಿಯಾಗಿದೆ. ಇಂದಿನಿಂದ ಹತ್ತು ದಿನ ಇರುವ ಈ ವಸ್ತುಪ್ರದರ್ಶನಕ್ಕೆ ಎಲ್ಲರೂ ಭೇಟಿ ಕೊಡಬಹುದು. ಹ್ಯಾಂಡ್ ಪೈಂಟ್, ಕರಕುಶಲ ವಸ್ತುಗಳು, ಗೃಹೋಪಯೋಗಿ ಅಲಂಕಾರಗಳ ವಸ್ತುಗಳು, ಬಟ್ಟೆಗಳು, ತುಂಬ ಚೆನ್ನಾಗಿವೆ. ಶಾಪಿಂಗ್ ಪ್ರಿಯರಿಗೆ ಸೂಕ್ತವಾದ ಜಾಗ ಎಂದು ಅಭಿಪ್ರಾಯಪಟ್ಟರು.