ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಅಂತಿಮ ವರ್ಷದ ಪದವಿ 6ನೇ ಸೆಮಿಸ್ಟರ್ ಪರೀಕ್ಷೆಗಳು ಆರಂಭಗೊಂಡಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿರುವ 600ಕ್ಕೂ ಹೆಚ್ಚು ಕಾಲೇಜುಗಳಲ್ಲಿನ ಒಟ್ಟು 205 ಪರೀಕ್ಷಾ ಕೇಂದ್ರಗಳಲ್ಲಿ 62,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಪರೀಕ್ಷೆಗಳಲ್ಲಿ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಹಾಗೂ ಕರ್ನಾಟಕ ಸರ್ಕಾರವು ಹೊರಡಿಸಿದ್ದ ಮಾರ್ಗಸೂಚಿಗಳಂತೆ ಪ್ರಾಮಾಣಿತ ಕಾರ್ಯಾಚರಣೆ ವಿಧಾನಗಳೊಂದಿಗೆ (Standard Operating Procedures) ಸ್ಯಾನಿಟೈಸೇಷನ್, ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಥಿಯರಿ ಪರೀಕ್ಷೆಗಳು ಅಕ್ಟೋಬರ್ ಮೊದಲ ವಾರದೊಳಗಾಗಿ ಪೂರ್ಣಗೊಳ್ಳುವುದು. ಈ ಪರೀಕ್ಷೆಗಳು ಪೂರ್ಣಗೊಂಡ ತರುವಾಯ ಎರಡು ವಾರದೊಳಗಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಬ್ಯಾಚ್ ತಯಾರಿಸುವಿಕೆ, ವೇಳಾಪಟ್ಟಿ, ಪರೀಕ್ಷಾಕಾರರ ಹಂಚಿಕೆ, ಸೆಪ್ಟಂಬರ್/ ಅಕ್ಟೋಬರ್ 2020ರ ಪರೀಕ್ಷೆಗಳಲ್ಲಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರಯೋಗ ಪರೀಕ್ಷೆಗಳ ಅಂಕಗಳನ್ನು ಗ್ರಹಿಸುವಿಕೆ, ಹೊಸ ತಂತ್ರಾಂಶವನ್ನು ಉಪಯೋಗಿಸಲಾಗುತ್ತಿದ್ದು, ಈ ಬಗ್ಗೆ ಪ್ರಾಂಶುಪಾಲರಿಗೆ ತರಬೇತಿ ನೀಡಲಾಗುತ್ತಿದೆ. ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ವ್ಯಾಲುಯೇಷನ್ ಕಾರ್ಯವಿಧಾನದಲ್ಲಿ ಮೌಲ್ಯಮಾಪನ ಮಾಡಿ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಒಂದು ತಿಂಗಳ ಒಳಗಾಗಿ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ.
ಯು.ವಿ.ಸಿ.ಇ. ಫಲಿತಾಂಶ ಮತ್ತು ಪ್ಲೇಸ್ಮೆಂಟ್ ಉದ್ಯೋಗ:
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಸ್ನಾತಕ ಪದವಿ ಬಿ.ಇ. ಇಂಜಿನಿಯರಿಂಗ್ ಅಂತಿಮ ವರ್ಷದ ಪರೀಕ್ಷೆಗಳು ಸೆಪ್ಟೆಂಬರ್ 1ರಿಂದ ಪ್ರಾರಂಭಗೊಂಡು 12ಕ್ಕೆ ಪೂರ್ಣಗೊಂಡಿವೆ. ಈ ಪರೀಕ್ಷೆಗಳು ಮುಗಿದ ಒಂದು ಗಂಟೆಯೊಳಗಾಗಿ ಪರೀಕ್ಷಾ ಫಲಿತಾಂಶಗಳನ್ನು ಅತಿ ಶೀಘ್ರವಾಗಿ ಪ್ರಕಟಿಸಲಾಗಿದೆ.
ಇಂದು ಹೊಸ ದಾಖಲೆ
ಪರೀಕ್ಷೆ ತೆಗೆದುಕೊಂಡ 600 ವಿದಾರ್ಥಿಗಳಲ್ಲಿ 580 ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿದ್ದಾರೆ. ಈ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿಯೂ ಸಹ ಯು.ವಿ.ಸಿ.ಇ. ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವುದಲ್ಲಿ ಹಿಂದೆ ಬಿದ್ದಿಲ್ಲ. ಶೇಕಡಾ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಕಿಸಿಕೊಡಲಾಗಿದೆ.
ಸ್ನಾತಕೋತ್ತರ ಪದವಿ ಪರೀಕ್ಷೆಗಳು
ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿನ ಅಂತಿಮ ವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಹಾಸ್ಟೆಲ್ಗಳಲ್ಲಿ ತಂಗಿದ್ದಾರೆ. ಇವರನ್ನು ಆರ್ಟಿಪಿಸಿಆರ್ ಪ್ರಮಾಣ ಪತ್ರ ಒದಗಿಸಿದ ನಂತರ ಹಾಸ್ಟೆಲ್ಗಳಿಗೆ ಪ್ರವೇಶಾತಿ ನೀಡಲಾಗಿದೆ. ಪ್ರಸ್ತುತ ಮೂವರು ವಿದ್ಯಾರ್ಥಿಗಳು ಕೋವಿಡ್ ಬಾಧಿತರಾಗಿರುವುದು ಕಂಡುಬಂದಿದ್ದು, ಇವರುಗಳನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಸ್ನಾತಕೋತ್ತರ ಪದವಿ ಪುನರ್-ಮನನ ತರಗತಿಗಳು ಸೆಪ್ಟೆಂಬರ್ 14ರಿಂದ ಪ್ರಾರಂಭಗೊಳ್ಳಲಿದ್ದು, ಅಂತಿಮ ವರ್ಷದ 4ನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಸೆಪ್ಟೆಂಬರ್ 28ರಿಂದ ಪ್ರಾರಂಭಗೊಳ್ಳಲಿವೆ. ವಿಶ್ವವಿದ್ಯಾಲಯವು ಎಲ್ಲಾ ಸಂಯೋಜಿತ ಕಾಲೇಜುಗಳಿಗೂ ಸ್ನಾತಕ ಪದವಿಯ 3 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್-ಲೈನ್ ತರಗತಿಗಳನ್ನು ಪ್ರಾರಂಭಿಸಲು ನಿರ್ದೇಶನ ನೀಡಿದೆ.