ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನಗರ ಸಂಚಾರಿ ಪೊಲೀಸರು, ಸೆ. 13ರಿಂದ ಸೆ. 19ರವರೆಗೆ ಒಟ್ಟು 48,141 ಪ್ರಕರಣ ದಾಖಲಿಸಿ, 21,43,80,000 ರೂ. ದಂಡ ವಸೂಲಿ ಮಾಡಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಭೌತಿಕವಾಗಿ ತಡೆದು ದಂಡ ವಿಧಿಸುಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ತಂತ್ರಜ್ಞಾನದ ಮೂಲಕ ಪ್ರಕರಣ ದಾಖಲಿಸಲಾಗುತ್ತಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಆದ ನಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನಗರ ಸಂಚಾರ ಪೊಲೀಸರು, ತಪ್ಪಿತಸ್ಥರನ್ನು ಭೌತಿಕವಾಗಿ ತಡೆದು ದಂಡ ವಿಧಿಸಲು ಪ್ರಾರಂಭಿಸಿದ್ದಾರೆ.
ಅದರಂತೆ ಸೆ. 13ರಿಂದ ಸೆ. 19ರವರೆಗೆ ಅಪಾಯಕಾರಿಯಾಗಿ ವಾಹನ ಚಾಲನೆ, ದೋಷಪೂರಿತ ಸೈಲೆನ್ಸರ್, ದೋಷಪೂರಿತ ಹಾರನ್, ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ, ಎಡ ಬದಿಯಿಂದ ಓವರ್‌ಟೇಕ್, ಹೆಡ್‌ಲೈಟ್ ಸಮಸ್ಯೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಕದೇ ಇರುವುದು, ನಿಗದಿತ ಜನಕ್ಕಿಂತ ಹೆಚ್ಚಿನ ಜನರನ್ನು ಸಾಗಿಸಿ ವಾಹನ ಚಾಲನೆ ಸೇರಿದಂತೆ ಇನ್ನಿತರ ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.