ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ರಿಲೀಫ್ ಬಳಿಕ ಸದ್ಯ ವಾಹನ ಸವಾರರ ಓಡಾಟ ಕೂಡ ಹೆಚ್ಚಾಗಿದೆ. ಈ ವೇಳೆ ಟ್ರಾಫಿಕ್ ನಿಯಮ ಉಲಂಘಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹೌದು, ಕೊರೊನಾ ಇರುವ ಕಾರಣ ಅತಿ ಹೆಚ್ಚಾಗಿ ತಂತ್ರಜ್ಞಾನ ಅಂದ್ರೆ ಸಿಗ್ನಲ್ ಬಳಿ ಇರುವ ಸಿಸಿಟಿವಿ ದೃಶ್ಯಗಳ ಆಧಾರ ಮೇಲೆ ಟ್ರಾಫಿಕ್ ಪೊಲೀಸರು ಸಿಗ್ನಲ್ ಬಳಿ, ರಸ್ತೆಯ ತಿರುವುಗಳ ಬಳಿ ನಿಂತು ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸ್ತಿದ್ದಾರೆ.
ಸದ್ಯ ಟ್ರಾಫಿಕ್ ಹೆಚ್ವುವರಿ ಆಯುಕ್ತ ರವಿಕಾಂತೇಗೌಡ ಇದೇ ತಿಂಗಳ 19ರಿಂದ 25ರವರೆಗೆ ಬೆಂಗಳೂರು ಸಂಚಾರ ಪೊಲೀಸರು ವಸೂಲಿ ಮಾಡಿರುವ ದಂಡದ ಬಗ್ಗೆ ಮಾಹಿತಿ ನೀಡಿದ್ದಾರೆ.
ಟ್ರಾಫಿಕ್ ಪೊಲಿಸರು ಒಂದೇ ವಾರದಲ್ಲಿ 3.63 ಕೋಟಿ ದಂಡ ಸಂಗ್ರಹ ಮಾಡಿದ್ದು, ಒಟ್ಟು 86,389 ಸಂಚಾರ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ನೋ ಪಾರ್ಕಿಂಗ್ 3,526 ಪ್ರಕರಣಗಳು ದಾಖಲಾಗಿದ್ದು, 1.13 ಲಕ್ಷ ದಂಡ ವಸೂಲಿಯಾಗಿದೆ. ಹೆಲ್ಮೆಟ್ ರಹಿತ ಚಾಲನೆ 28,201 ಪ್ರಕರಣಗಳು ದಾಖಲಾಗಿದ್ದು, 10 ಲಕ್ಷ ದಂಡ, ಹಿಂಬದಿ ಸವಾರ ಹೆಲ್ಮೆಟ್ ಹಾಕದೆ ಇರೋದು 17,105 ಕೇಸ್ ದಾಖಲಾಗಿದ್ದು, 6.23 ಲಕ್ಷ ರೂ. ದಂಡ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುತ್ತಿದ್ದವರ ಮೇಲೆ 2,448 ಕೇಸ್ ದಾಖಲಾಗಿದ್ದು, 1.68 ಲಕ್ಷ ರೂ. ದಂಡ ವಸೂಲಿ, ಸೀಟ್ ಬೆಲ್ಟ್ ರಹಿತ 4,827 ಪ್ರಕರಣಗಳು ದಾಖಲಾಗಿದ್ದು, 2.29 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಇನ್ನು ನೋ ಎಂಟ್ರಿ 3,790 ಪ್ರಕರಣಗಳು ದಾಖಲಾಗಿದ್ದು, 1.44 ಲಕ್ಷ ರೂ. ದಂಡ, ಓವರ್ ಸ್ಪೀಡ್ 36 ಪ್ರಕರಣಗಳು ದಾಖಲಾಗಿದ್ದು, 9,900 ರೂ. ದಂಡ, ಡ್ರಂಕ್ ಅಂಡ್ ಡ್ರೈವ್ 4 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಒಂದು ವಾರದಲ್ಲಿ ಒಟ್ಟು 86,380 ಪ್ರಕರಣ ದಾಖಲಿಸಿ 3,63,07,300 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಫೈನ್ ಹಾಕುವಲ್ಲಿ ಟ್ರಾಫಿಕ್ ಪೊಲೀಸರು ನಿರತರಾಗಿದ್ದಾರೆ.