ಬೆಂಗಳೂರು: ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಬೃಹತ್ ಆಂದೋಲನಕ್ಕೆ ಮೇಯರ್ ಗಂಗಾಭಿಕೆ ಚಾಲನೆ ನೀಡಿದರು.
ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿರುವ ಬಗ್ಗೆ ಅಂಗಡಿ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮೇಯರ್ ನೇತೃತ್ವದಲ್ಲಿ ನಗರದ ಪ್ರಮುಖ ಮಾರುಕಟ್ಟೆ ಹಾಗೂ ಕಾಂಪ್ಲೆಕ್ಸ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಿಂದ ಪ್ರತ್ಯೇಕ ತಂಡಗಳ ಮೂಲಕ ಅನಿರೀಕ್ಷಿತ ತಪಾಸಣೆ ಕೈಗೊಂಡು, ಯಶವಂತಪುರ ಎಪಿಎಂಸಿ ಯಾರ್ಡ್, ಜಯನಗರ ಮಾರುಕಟ್ಟೆ, ಶಿವಾಜಿನಗರ ರಸೆಲ್ ಮಾರುಕಟ್ಟೆ, ಶಾಂತಿನಗರದ ಜಾನ್ಸನ್ ಮಾರುಕಟ್ಟೆ ಮತ್ತು ಆಸ್ಟಿನ್ ಟೌನ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್, ವಿಜಯನಗರ ಮಾರುಕಟ್ಟೆ ಹಾಗೂ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಾಯಿತು.
ಮೇಯರ್ ನೇತೃತ್ವದ ತಂಡವು ಮೊದಲಿಗೆ ಯಶವಂತಪುರ ಎಪಿಎಂಸಿ ಯಾರ್ಡ್ಗೆ ಭೇಟಿ ನೀಡಿ ಸಗಟು ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಿತು. ಈ ವೇಳೆ ಗಜಾನನ ಪ್ರಾವಿಜನ್ ಸ್ಟೋರ್, ಬೃಂದಾವನ ಟ್ರೇಡರ್ಸ್, ರಾಘವೇಂದ್ರ ಪ್ಲಾಸ್ಟಿಕ್, ವರಲಕ್ಷ್ಮೀ ಟ್ರೇಡರ್ಸ್ ಸೇರಿದಂತೆ ಒಟ್ಟು ನಲವತ್ತು ಮಳಿಗೆಗಳ ಮೇಲೆ ದಾಳಿ ನಡೆಸಿ 150 ಕೆಜಿ ಪ್ಲಾಸ್ಟಿಕ್ ಜಪ್ತಿ ಮಾಡಲಾಯಿತು.
ಪ್ಲಾಸ್ಟಿಕ್‌ನಿಂದ ಉತ್ಪತ್ತಿಯಾಗುವ ಸ್ಪೂನ್, ಪ್ಲೇಟ್, ಪಾಲಿಥೀನ್ ಕವರ್‌ಗಳ ಜಪ್ತಿ ಮಾಡುವ ಜೊತೆಗೆ ಇನ್ನು ಮುಂದೆ ಪ್ಲಾಸ್ಟಿಕ್‌ನಿಂದ ತಯಾರಾಗುವ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡುವಂತಿಲ್ಲ. ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಹಾಗೂ ಪೇಪರ್ ಬ್ಯಾಗ್ಗಳನ್ನು ಬಳಸಬೇಕು. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ನಗರದೆಲ್ಲೆಡೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನವಿ ಮಾಡಲಾಯಿತು.
ನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಇದೇ ರೀತಿ ಒಂದು ವಾರಗಳ ಕಾಲ ಎಲ್ಲಾ 198 ವಾರ್ಡ್ಗಳ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಜೊತೆಗೆ ಕಂಡುಬರುವ ಪ್ಲಾಸ್ಟಿಕ್‌ನ್ನು ಜಪ್ತಿ ಮಾಡಲಿದ್ದಾರೆ. ಒಂದು ವಾರದ ಬಳಿಕವೂ ಪ್ಲಾಸ್ಟಿಕ್ ಬಳಕೆ ಮಾಡಿದರೆ ಪ್ಲಾಸ್ಟಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸಲಾಗುವುದು. ಬಳಿಕವೂ ಪ್ಲಾಸ್ಟಿಕ್ ಬಳಕೆ ಮುಂದುವರಿದಲ್ಲಿ ಮಳಿಗೆಗಳ ಪರವಾನಗಿ ರದ್ದುಗೊಳಿಸಿ ಬೀಗ ಜಡಿಯಲಾಗುವುದು ಎಂದು ಮೇಯರ್ ಎಚ್ಚರಿಕೆ ನೀಡಿದರು. ಬಳಿಕ ವಿಜಯನಗರ ಮಾರುಕಟ್ಟೆಗೆ ಭೇಟಿ ನೀಡಿ ಬೀದಿ ಬದಿ ವ್ಯಾಪಾರಿಗಳ ಬಳಿ ಇದ್ದ ಪ್ಲಾಸ್ಟಿಕ್ ಕೈ ಚೀಲಗಳನ್ನು ಜಪ್ತಿ ಮಾಡಿ, ಇನ್ನು ಮುಂದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚನೆ ನೀಡಿದರು.
ಕೊನೆಗೆ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ಗೆ ಭೇಟಿ ನೀಡಿ ಪ್ಲಾಸ್ಟಿಕ್ ಕೈ ಚೀಲಗಳು ಇವೆಯೇ ಎಂದು ವ್ಯಾಪಾರಸ್ಥರನ್ನು ಕೇಳಿದರು. ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಸಿಗದಿರುವುದನ್ನು ಕಂಡ ಮೇಯರ್, ಭಾನುವಾರ ನಾನು ಇಲ್ಲಿಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಕವರ್‌ಗಳು ಇದ್ದವು. ಆದರೆ ಇಂದು ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕಾಣುತ್ತಿಲ್ಲ. ಆರೋಗ್ಯಾಧಿಕಾರಿಗಳು ನಾವು ಬರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದಾರೆ. ಆದ್ದರಿಂದಲೇ ಪ್ಲಾಸ್ಟಿಕ್ ಬಳಕೆ ಮಾಡುತ್ತಿಲ್ಲ ಎಂದರು. ಈ ಬಗ್ಗೆ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸುವಂತೆ ವಿಶೇಷ ಆಯುಕ್ತ ರಂದೀಪ್ ಅವರಿಗೆ ಮೇಯರ್ ಸೂಚನೆ ನೀಡಿದರು.
ಶುಕ್ರವಾರ ಸಭೆ: ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ವಿತರಕರು, ಪ್ಯಾಕರ್ಸ್ ಹಾಗೂ ಸಗಟು ವ್ಯಾಪಾರಿಗಳ ಜೊತೆ ಜುಲೈ 19 ಶುಕ್ರವಾರ ಟೌನ್ ಹಾಲ್‌ನಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಬಳಕೆ ಮಾಡದಂತೆ ಮಾಹಿತಿ ನೀಡಲಾಗವುದು ಎಂದು ಮೇಯರ್ ಗಂಗಾಭಿಕೆ ತಿಳಿಸಿದರು.