ಬೆಂಗಳೂರು: ಬಿ2ಬಿ (ಬ್ಯುಸಿನೆಸ್ ಟು ಬ್ಯುಸಿನೆಸ್) , ಬಿ2ಸಿ (ಬ್ಯುಸಿನೆಸ್ ಟು ಕನ್ಸ್ಯೂಮರ್) ಉದ್ಯಮಗಳು ಭಾರತದಲ್ಲಿ ಈಗಿನ್ನೂ ಆರಂಭದ ಹಂತದಲ್ಲಿವೆ. ಇನ್ನೂ 30 ಪಟ್ಟು ಮಾರುಕಟ್ಟೆ ಬೆಳೆಯಲು ಅವಕಾಶವಿದೆ ಎಂದು ಸ್ವೀಕ್ವಿಯಾ ಕ್ಯಾಪಿಟಲ್ ಮತ್ತು ಸರ್ಜ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ ಹೇಳಿದರು.
“ಬೆಂಗಳೂರು ತಂತ್ರಜ್ಞಾನ ಮೇಳ-2020”ದ ಮೂರನೇ ದಿನವಾದ ಶನಿವಾರ 'ಸ್ಟಾರ್ಟ್ ಅಪ್ ರೀಬೂಟ್' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಲಾಭದಾಯಕ ಎಂಬ ಕಲ್ಪನೆ 5 ವರ್ಷಗಳ ಹಿಂದೆ ಇರಲಿಲ್ಲ. ಈಗ ತುಂಬಾ ಬದಲಾಗಿದೆ. ಭಾರತದ ನವೋದ್ಯಮ ಪರ್ಯಾವರಣ (ಸ್ಟಾರ್ಟಪ್ ಇಕೊಸಿಸ್ಟಮ್) ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ತುಂಬಾ ವಿಸ್ತಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಾಕಷ್ಟು ಅಭಿವೃದ್ಧಿಯಾಗಿಲ್ಲ ಎಂಬುದು ನಿಜ. ಆದರೆ ಇರುವ ತಂತ್ರಜ್ಞಾನವನ್ನು ಆಧರಿಸಿ ಗ್ರಾಹಕರ-ಉದ್ಯಮದ ಅಗತ್ಯ, ಜನರ ಸಮಸ್ಯೆಯ ಆಳವಾದ ಅರ್ಥೈಸುವಿಕೆಯೊಂದಿಗೆ ಕಾರ್ಯಾಚರಣೆ ಮಾಡಿದಾಗ ನವೋದ್ಯಮಗಳು ಯಶಸ್ವಿಯಾಗುತ್ತವೆ ಎಂದು ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದರು.
ತಂತ್ರಜ್ಞಾನದ ನೈಜ ಆವಿಷ್ಕಾರ ಭಾರತದಲ್ಲಿ ಆಗುತ್ತಿಲ್ಲ. ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ನಡೆಸಬೇಕು. ಆದರೆ ಇಷ್ಟಕ್ಕೇ ಕೈಕಟ್ಟಿ ಕೂರಬೇಕಿಲ್ಲ. ನಾವು ಯಾವುದರಲ್ಲಿ ಬಲಿಷ್ಠವಾಗಿದ್ದೇವೋ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಜಿಯೊ, ಟಿಸಿಎಸ್, ಉಬರ್, ಝೂಮ್ ಇವ್ಯಾವೂ ತಂತ್ರಜ್ಞಾನಗಳನ್ನು ಆವಿಷ್ಕರಿಸಿದ ಕಂಪನಿಗಳಲ್ಲ. ಇವೆಲ್ಲವೂ ಇರುವ ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಸಮಸ್ಯೆಗಳ ಪರಿಹಾರಕ್ಕಿಳಿದ ಯಶಸ್ವಿ ಪ್ರಯತ್ನಗಳಾಗಿವೆ ಎಂದು ಬೊಟ್ಟು ಮಾಡಿದರು.
ಭಾರತದ ಕಂಪನಿಗಳಿಗೆ ಭಾರತದ ಬಂಡವಾಳ ಮಾತ್ರ ಎಂಬುದು ಹಳೆಯ ಕಲ್ಪನೆ. ನಾವೀಗ ಅತ್ಯುತ್ತಮ ಬಂಡವಾಳವನ್ನು ಜಗತ್ತಿನ ಯಾವುದೇ ಮೂಲೆಯಿಂದ ಹೇಗೆ ತರಬಹುದು ಎಂಬುದರ ಕುರಿತು ಚಿಂತಿಸಬೇಕು. ಜಾಗತಿಕವಾಗಿ 20 ಲಕ್ಷ ಕೋಟಿ ಬಂಡವಾಳ ಲಭ್ಯವಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಭಾರತೀಯ ಕಂಪನಿಗಳು ನಾಸ್ಡಾಕ್‌ನಂತಹ ಅಂತಾರಾಷ್ಟ್ರೀಯ ಷೇರುಪೇಟೆಗಳನ್ನು ಪ್ರವೇಶಿಸುವತ್ತ ಚಿಂತನೆ ಮಾಡಬೇಕು. ಆರಂಭದಲ್ಲಿ ದೇಶೀಯ ಐಪಿಒ ಮೂಲಕ ಬಂಡವಾಳ ಸಂಗ್ರಹಿಸಬೇಕು. ನಂತರ ಸಣ್ಣ ಸಣ್ಣ ಕಂಪನಿಗಳ ಸ್ವಾಧೀನ ಮಾಡುತ್ತಾ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟ ಅವರು 2022ರ ವೇಳೆಗೆ ಅನೇಕ ಸ್ಟಾರ್ಟ್ ಅಪ್‌ಗಳು ಐಪಿಒ ಲಿಸ್ಟ್ ಆಗಲಿವೆ ಎಂದರು. ಐಡಿಯಾಸ್ಪ್ರಿಂಗ್ ಕ್ಯಾಪಿಟಲ್ ಸಿಇಒ ನಾಗಾನಂದ ದೊರೆಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.