'ಬೆಂಗಳೂರು ತಂತ್ರಜ್ಞಾನ ಮೇಳ-2020': ‘ಹೈಬ್ರಿಡ್’ ಆಗಲಿದೆ ಉದ್ಯೋಗದ ಸ್ವರೂಪ, ತಜ್ಞರ ಅಭಿಪ್ರಾಯ - ಉದ್ಯೋಗಗಳ ಭವಿಷ್ಯದ ನೋಟ
“ಬೆಂಗಳೂರು ತಂತ್ರಜ್ಞಾನ ಮೇಳ-2020”ರಲ್ಲಿ 'ಉದ್ಯೋಗಗಳ ಭವಿಷ್ಯದ ನೋಟ: ಹೊಸ ಸಾಧ್ಯತೆಗಳ ಅನಾವರಣ' ಕಾರ್ಯಕ್ರಮದಲ್ಲಿ ತಪಸ್ ಪಾಂಡಾ ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವು ಹಿರಿಯ ತಜ್ಞರು ಈ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದರು.

ಬೆಂಗಳೂರು: ಮುಂಬರುವ ದಿನಗಳಲ್ಲಿ ಉದ್ಯೋಗಗಳು ಮನೆ ಹಾಗೂ ಕಚೇರಿ ಎರಡೂ ಕಡೆಗಳಿಂದ ನಡೆಯುವ 'ಹೈಬ್ರಿಡ್' ರೂಪಕ್ಕೆ ಬದಲಾಗುತ್ತವೆ ಎಂದು ಹೆಚ್‌ಪಿ ಸಂಸ್ಥೆಯ ತಪಸ್ ಪಾಂಡಾ ಅಭಿಪ್ರಾಯಪಟ್ಟರು.

“ಬೆಂಗಳೂರು ತಂತ್ರಜ್ಞಾನ ಮೇಳ-2020”ರಲ್ಲಿ 'ಉದ್ಯೋಗಗಳ ಭವಿಷ್ಯದ ನೋಟ: ಹೊಸ ಸಾಧ್ಯತೆಗಳ ಅನಾವರಣ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವು ಹಿರಿಯ ತಜ್ಞರು ಈ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದರು.
ಕೋವಿಡ್ ಬಿಕ್ಕಟ್ಟಿನ ಸನ್ನಿವೇಶದಲ್ಲಿ 'ಸೈಬರ್' ಹಾಗೂ 'ಭೌತಿಕ' ಪ್ರಪಂಚಗಳು ಒಂದುಗೂಡಿ 'ಸೈಬರ್ ಫಿಸಿಕಲ್' ವ್ಯವಸ್ಥೆಗಳು ರೂಪುಗೊಂಡಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಪ್ರಾರಂಭವಾಗಿದ್ದ ಬದಲಾವಣೆಗಳ ವೇಗವರ್ಧನೆಗೆ ಕೋವಿಡ್-19 ಕಾರಣವಾಗಿದೆ. ಉದ್ಯೋಗಿಗಳು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುವುದರಿಂದ ಕಚೇರಿಗಾಗಿ ಸ್ಥಳದ ಅಗತ್ಯಗಳು ಕಡಿಮೆಯಾಗುತ್ತವೆ. ಇರುವ ಕಚೇರಿಗಳಲ್ಲೂ ಸ್ಪರ್ಶರಹಿತ (ಟಚ್-ಫ್ರೀ) ಅನುಭವಕ್ಕಾಗಿ ಹೊಸ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೆಲವು ವಲಯದ ಕಂಪನಿಗಳು ಉದ್ಯೋಗಿಗಳ ಪರಿಣತಿಯನ್ನು ಭೌಗೋಳಿಕ ಮಿತಿಗಳಿಲ್ಲದೆ ಬಳಸಿಕೊಳ್ಳಬಹುದು ಎಂಬುದನ್ನು ಕೋವಿಡ್-19 ಸಂದರ್ಭವು ಮನವರಿಕೆ ಮಾಡಿಕೊಟ್ಟಿದೆ. ಕೆಲವು ಕೆಲಸಗಳನ್ನು ಎಲ್ಲಿಂದ ಬೇಕಾದರೂ ಮಾಡಬಹುದಾಗಿದೆ. ಈ ನಮ್ಮ ಮಹಾನಗರಗಳ ಮೇಲಿನ ಒತ್ತಡವನ್ನೂ ಕಡಿಮೆಮಾಡಲು ಸಾಧ್ಯ ಎಂಬುದು ಇದರಿಂದ ಗೊತ್ತಾಗಿದೆ. “ಎಲ್ಲಿಂದ ಬೇಕಾದರೂ ಕೆಲಸ ಮಾಡಿ” ಪರಿಕಲ್ಪನೆ ನಿಜಕ್ಕೂ ಕಾರ್ಯಗತಗೊಳ್ಳಬಹುದೇ ಎನ್ನುವುದರ ಬಗ್ಗೆ ನಮಗೆ ಇದ್ದ ಎಲ್ಲಾ ಸಂದೇಹಗಳನ್ನೂ ಕೋವಿಡ್-19 ಸನ್ನಿವೇಶ ಹೋಗಲಾಡಿಸಿದೆ ಎಂದು ಮೈಕ್ರೋಲ್ಯಾಂಡ್ ಸಂಸ್ಥಾಪಕ ಪ್ರದೀಪ್ ಕರ್ ವಿವರಿಸಿದರು.
ಈಗಾಗಲೇ ನಡೆದಿದ್ದ ಆಟೋಮೇಶನ್ ಪ್ರಕ್ರಿಯೆಯ ಜೊತೆಗೆ ಕೋವಿಡ್-19 ಸನ್ನಿವೇಶವೂ ಸೇರಿ ಉದ್ಯೋಗಗಳ ಭವಿಷ್ಯವೇ ಬದಲಾಗಿದೆ. ದೂರ ಸಂಪರ್ಕ ಜಾಲಗಳ ಸಾಮರ್ಥ್ಯದಿಂದ ಪ್ರಾರಂಭಿಸಿ ಉದ್ಯೋಗಿಗಳ ಯೋಗಕ್ಷೇಮ ನೋಡಿಕೊಳ್ಳುವವರೆಗೆ ಪ್ರತಿಯೊಂದು ಹಂತದಲ್ಲೂ ಎದುರಿಸಬೇಕಾಗಿದೆ. ಬಂದ ಸವಾಲುಗಳನ್ನು ಈವರೆಗೆ ಎಲ್ಲರೂ ಒಟ್ಟಾಗಿ ಎದುರಿಸಿರುವ, ಪರಿಹಾರಗಳನ್ನು ಕಂಡುಕೊಂಡಿರುವ ಬಗೆ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
'ಹೊಸ ಸಹಜ' (ನ್ಯೂ ನಾರ್ಮಲ್) ಸನ್ನಿವೇಶಕ್ಕೆ ಹೊಂದಿಕೊಳ್ಳಲು ಎಲ್ಲಾ ಕ್ಷೇತ್ರಗಳ ಜನರೂ ಮುಂದೆ ಬಂದಿದ್ದಾರೆ. ಸಂಸ್ಥೆಗಳ ಉದ್ಯೋಗಿಗಳು ಮಾತ್ರವೇ ಅಲ್ಲದೆ ದೂರ ಸಂಪರ್ಕ ಸಂಸ್ಥೆಗಳು, ಸರ್ಕಾರದ ಅಧಿಕಾರಿಗಳು ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೋರಿಸಿರುವ ಉತ್ಸಾಹ ಉಲ್ಲೇಕಾರ್ಹ ಎಂದು ಆಲ್‌ಸ್ಟೇಟ್ ಇಂಡಿಯಾ ಸಂಸ್ಥೆಯ ಎಂಡಿ ಚೇತನ್ ಗರ್ಗ್ ಅಭಿಪ್ರಾಯಪಟ್ಟರು.
ಉದ್ಯೋಗದ ಸ್ವರೂಪ ಬದಲಾದಂತೆ ಉದ್ಯೋಗಿಗಳ ಮೇಲಿನ ಒತ್ತಡ ಹೆಚ್ಚುವ ಸಾಧ್ಯತೆಯೂ ಜಾಸ್ತಿಯಿದ್ದು, ಇದು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಯುನಿಸಿಸ್ ಇಂಡಿಯಾದ ಸುಮೇದ್ ಮಾರ್ವಾಹಾ ಅಭಿಪ್ರಾಯಪಟ್ಟರು. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಹಾಗೂ “ಎಲ್ಲಿಂದಲಾದರೂ ಕೆಲಸ ಮಾಡಬಹುದಾದ” (ವರ್ಕ್ ಫ್ರಮ್ ಎನಿವೇರ್) ಪರಿಸ್ಥಿತಿಯಲ್ಲಿ ಸೈಬರ್ ಸುರಕ್ಷತೆ ಕಾಪಾಡಿಕೊಳ್ಳಲು ಉದ್ಯೋಗಿಗಳು ಮತ್ತು ಉದ್ಯೋಗದಾತರಿಬ್ಬರೂ ಒಟ್ಟಾಗಿ ಶ್ರಮಿಸಬೇಕೆಂದರು.