ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಗೆ ಜೆಡಿಯು ಪಕ್ಷದಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷೆ ಮಹಿಮಾ ಜೆ. ಪಟೇಲ್, ಗ್ರಾಮೀಣ ಮಟ್ಟದಿಂದ ನಮ್ಮ ಹೋರಾಟ ನಡೆದಿದೆ. ಗ್ರಾಮ ಸ್ವರಾಜ್ಯ ನಮ್ಮ ಕಲ್ಪನೆ, ಗ್ರಾಮಗಳ ಉದ್ಧಾರವೇ ನಮ್ಮ ಪಕ್ಷದ ಧ್ಯೇಯವಾಗಿದೆ. ಶಿಕ್ಷಕರ ಪರ ಹಿಂದಿನಿಂದಲೂ ಜೆಡಿಯು ಹೋರಾಟ ಮಾಡುತ್ತಿದೆ. ಪರಿಷತ್ನಲ್ಲಿ ನಮ್ಮ ಹೋರಾಟ ಮುಂದುವರೆಯಲಿದ್ದು, ಈ ಉದ್ದೇಶದಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನ ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಜೆಡಿಯು ಅಭ್ಯರ್ಥಿ ಚಂದ್ರಶೇಖರ್ ವಿ. ಸ್ಥಾವರ ಮಠ ಮಾತನಾಡಿ, ಹಿಂದೆ ನಾವು ಶಿಕ್ಷಕರನ್ನು ಸೃಷ್ಟಿಕರ್ತ ಬ್ರಹ್ಮನಿಗೆ ಹೋಲಿಸುತ್ತಿದ್ದೆವು. ಉತ್ತಮ ರಾಷ್ಟ್ರ, ಸಮಾಜವನ್ನ ಕಟ್ಟುವಂತಹ ಶಕ್ತಿ ಹೊಂದಿದ್ದ ಶಿಕ್ಷಕರನ್ನ 70ರ ದಶಕದ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು, ಕಡೆಗಣನೆ ಮಾಡುತ್ತಾ ಬಂದಿವೆ. ಇಂದು ಶಿಕ್ಷಕರ ಸ್ಥಿತಿ ಸಂಕಷ್ಟದಲ್ಲಿದೆ. ಕೋವಿಡ್ 19 ನಿಂದಾಗಿ ರಾಜ್ಯಾದ್ಯಂತ 35 ಸಾವಿರ ಶಿಕ್ಷಕರು ಕಷ್ಟದಲ್ಲಿದ್ದಾರೆ. ಹಲವು ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಈ ನಿಟ್ಟಿನಲ್ಲಿ ಜೆಡಿಯುನಿಂದ ಜ್ಯೋತಿ ಯಾತ್ರೆ ಆರಂಭಿಸುತ್ತಿದ್ದೇವೆ. ಪಕ್ಷದ ಕಚೇರಿಯಿಂದ ಜ್ಯೋತಿ ಯಾತ್ರೆ ಆರಂಭಿಸಿ, ಮುಖ್ಯಮಂತ್ರಿಗಳ ಕಚೇರಿವರೆಗೆ ತೆರಳಿ ಮನವಿ ನೀಡುವ ಮೂಲಕ ಜನಾಭಿಯಾನ ಆರಂಭಿಸುತ್ತಿದ್ದೇವೆ ಎಂದರು.