ಬೆಂಗಳೂರು: ಇದು ರಾಹುಲ್- ಮೋದಿ ನಡುವೆ, ಪಕ್ಷದ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲ. ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ನಾಯಕತ್ವದಲ್ಲಿ ಬಿಜೆಪಿ ಐದು ವರ್ಷ ಪೂರೈಸಿದೆ. ಇಲ್ಲಿ ಮುಖ್ಯವಾಗಿ ಮೋದಿ ಐದು ವರ್ಷದ ಸಾಧನೆಯಲ್ಲಿ ಹೇಳಿದ್ದೇನು, ಮಾಡಿದ್ದೇನು ಎನ್ನುವುದನ್ನು ಜನರ ಮುಂದಿಡುವುದು ಸರ್ಕಾರದ ಕರ್ತವ್ಯ. ಸಂವಿಧಾನದ ಉಳಿವು ಮುಖ್ಯ. ಮೋದಿ ಸರ್ಕಾರದ ಸಾಧನೆ, ಅಭಿವೃದ್ಧಿ, ಜನರ ಬಗ್ಗೆ ಮಾತಾಡಿದ್ದು ವಿರಳ.
ಭಾವನಾತ್ಮಕ ವಿಚಾರದ ಬಗ್ಗೆ, ಪ್ರತಿಪಕ್ಷಗಳ ಮಹಾಘಟ ಬಂಧನ್, ದೇಶದ ರಕ್ಷಣೆ ವಿಚಾರ ಮಾತಿಗೆ ಒತ್ತು ಕೊಡುತ್ತಿದ್ದಾರೆ. ಏನು ಹೇಳಿದ್ದೆವು, ಏನು ಮಾಡಿದ್ದೆವು ಎನ್ನುವುದನ್ನು ಹೇಳುತ್ತಿಲ್ಲ. ಐದು ವರ್ಷ ಭ್ರಮಾಲೋಕ ಸೃಷ್ಟಿಸಿ ಜನರನ್ನು ಮರಳು ಮಾಡಿದ್ದರು. ಜನ ಕೂಡ ಬದಲಾವಣೆ ಬಯಸಿದ್ದರು. ಇದರ ಲಾಭ ಮೋದಿಗೆ ಸಿಕ್ಕಿತು. ಆಕರ್ಷಣೆಯ ಮಾತಿಗೆ ಜನ ಬೆಲೆ ಕೊಟ್ಟರು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸ ಇದೆ. ಜನರನ್ನು ಈಗ ನಂಬಿಸಲು ಸಾಧ್ಯವಿಲ್ಲ. ದೇಶದ ಜನ ರಾಜಕೀಯವಾಗಿ ಪ್ರಭುದ್ಧರಾಗಿದ್ದಾರೆ.
ಕೊಟ್ಟ ಭರವಸೆ ಏನಾಯಿತು?
ಸರ್ಜಿಕಲ್ ಸ್ಟ್ರೈಕನ್ನು ದೊಡ್ಡ ಸಾಧನೆ ಅಂದುಕೊಂಡಿದ್ದರು. ಇದೇ ಚುನಾವಣೆ ಗೆಲ್ಲಲು ಸಾಧ್ಯ ಅಂದುಕೊಂಡರೆ ಮೂರ್ಖತನವಾಗಲಿದೆ. ನೀವು ಕೊಟ್ಟ ಭರವಸೆ ಏನಾಯಿತು. 15 ಲಕ್ಷ ಎಲ್ಲಿ ಬಂತು, ನೋಟು ಅಮಾನ್ಯದ ನಂತರ ಎಷ್ಟು ಕಪ್ಪು ಹಣ ಬಂತು, ಯಾರ ವಿರುದ್ಧ ಕ್ರಮ ಕೈಗೊಂಡಿದ್ದೀರಿ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೊದಲೇ ಹೇಳಿದ್ದರು. ಜಿಡಿಪಿ ಶೇ. 2 ರಷ್ಟು ಕಡಿಮೆ ಆಗಲಿದೆ ಎಂದಿದ್ದರು. ಅದು ಆಗಿದೆ. ಅರ್ಥಶಾಸ್ತ್ರ ದ ಬಗ್ಗೆ ಎಲ್ಲಾ ಮಾತಾಡುತ್ತಾರೆ. ದೇಶ ಬಲಿಷ್ಠ ಪ್ರಧಾನಿ ಕೈಲಿದೆ, ಸುರಕ್ಷಿತರ ಕೈಲಿ ರಾಷ್ಟ್ರವಿದೆ ಎನ್ನುತ್ತಾರೆ. ಜನರಿಗೆ ನಾವು ನಮ್ಮ ತಪ್ಪು ಮುಚ್ಚಿಟ್ಟು, ಭಾವನಾತ್ಮಕ ವಿಚಾರದ ಮೂಲಕ ಮರೆಮಾಚಲು ಹೋದರೆ, ಒಂದಲ್ಲ ಒಂದು ದಿನ ಜನರ ಮುಂದೆ ಬಣ್ಣ ಬಯಲಾಗಲೇ ಬೇಕು. ಸಾಲಮನ್ನಾ ಮಾಡಿಲ್ಲ.
ಪ್ರಜಾಪ್ರಭುತ್ವ ಇವತ್ತು ಉಳಿಯಬೇಕಿದೆ
ಸಿಬಿಐ, ಸಿಇಸಿ, ನ್ಯಾಯಾಲಯಗಳು ಕೂಡ ಬೀದಿಗೆ ಬರುವ ಸ್ಥಿತಿಗೆ ಬರುವಂತಾಗಿದೆ. ನ್ಯಾಯಾಲಯಗಳಲ್ಲಿ ಸತ್ಯ ಹೇಳುವುದು ಕಷ್ಟ ಆಗಿದೆ. ಮಾತು ಎತ್ತಿದ್ರೆ ಎಲ್ಲರೂ ಚೌಕಿದಾರ್ ಎನ್ನುತ್ತಾರೆ. ಇದು ಒಂದು ರೀತಿಯ ಚಟ ಆಗ್ಬಿಟ್ಟಿದೆ. ಯಡಿಯೂರಪ್ಪ, ಈಶ್ವರಪ್ಪ, ಎಲ್ಲಾರು ಕೂಡ ಚೌಕಿದಾರ್ ಆಗ್ಬಿಟ್ಟಿದ್ದಾರೆ. ಸಾಮಾಜಿಕ ಬದ್ಧತೆ ಇವರಿಗೆ ಎಷ್ಟಿದೆ? ಎಲ್ಲಕ್ಕೂ ಉತ್ತರ ಕೊಡಿ. ಸಂವಿಧಾನ ಬದಲಿಸಿ ಎಲ್ಲರಿಗೂ ಸಮಾನತೆ ಇಲ್ಲದಂತೆ ಮಾಡಲು ಹೊರಟಿದ್ದಾರೆ. ಸಂವಿಧಾನ ರಕ್ಷಣೆ ವಿಚಾರದಲ್ಲಿ ಆತಂಕ ಶುರುವಾಗಿದೆ. ಸಂವಿಧಾನಾತ್ಮಕ ಸಂಸ್ಥೆ ದುರ್ಭಲಗೊಳಿಸುವ ಜತೆಗೆ ಸಾಮಾನ್ಯ ಜನರಿಗೆ ಭದ್ರತೆ ನೀಡುವ ಕಾರ್ಯ ಮಾಡಿಲ್ಲ ಎಂದರು.
ನಾವು ಬೆಂಬಲ ಕೊಟ್ಟ ಮೇಲೆ ಆದದ್ದು
ಯಡಿಯೂರಪ್ಪ, ಕುಮಾರಸ್ವಾಮಿ ಅವರು ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದೆ, ಈಗ ಅವರು ಆಗಿದ್ದಾರೆ. ಯಡಿಯೂರಪ್ಪ ಮೂರು ದಿನ ಮಾತ್ರ ಆಗಿದ್ದರು. ಕುಮಾರಸ್ವಾಮಿ ನಾವು ಬೆಂಬಲ ಕೊಟ್ಟಿದ್ದರಿಂದ ಮಾತ್ರ ಸಿಎಂ ಆಗಿದ್ದಾರೆ. ಅಂದ ಮೇಲೆ ಏನಾಯಿತು. ರಾಜಕೀಯ ಪ್ರೇರಿತ, ಪ್ರತಿಪಕ್ಷ ಗುರಿಯಾಗಿಸಿಕೊಂಡು ನಡೆಸುವ ದಾಳಿ ಬೇಡ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕ ಆದಾಯ ತೆರಿಗೆ ದಾಳಿ ಸರಿಯಲ್ಲ ಅಂದಿದ್ದೇನೆ. ಅಮಿತ್ ಷಾ, ಮೋದಿ ಬಂದರೆ ನಮಗೆ ಭಯವಿಲ್ಲ. ಧಾರಾಳವಾಗಿ ಪ್ರಚಾರಕ್ಕೆ ಬರಲಿ. ಷಾ ಬಂದಷ್ಟು ರಾಜ್ಯದಲ್ಲಿ ನಮಗೆ ಅನುಕೂಲ. ಮೈಸೂರಿನಲ್ಲಿ ಮತ ಅಂತರ ಗೊತ್ತಿಲ್ಲ. ನಾವು ಗೆಲ್ಲುತ್ತೇವೆ. ನಂಬಿಕೆ, ಕುಡುಂಬ ರಾಜಕಾರಣದ ಬಗ್ಗೆ ನಮ್ಮ ವಿರೋಧ ಇಲ್ಲ. ಅರ್ಹತೆ ಇದ್ದರೆ ಅವಕಾಶ ಪಡೆಯುವುದು ತಪ್ಪಲ್ಲ ಎಂದು ಹೇಳಿದರು
.