ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಪ್ರಕರಣವಾದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾದಕ ದ್ರವ್ಯಗಳನ್ನು ತಯಾರಿಸುವ ವಿದೇಶಿ ವ್ಯಕ್ತಿಯ ಮೇಲೆ ದಾಳಿ ನಡೆಸಿ ಪ್ರಕರಣ ಭೇದಿಸುವಲ್ಲಿ ಸಿಸಿಬಿಯ ಆಂಟಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಬಂಧಿತನಿಂದ 2 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ (ಸಿಂಥೆಟಿಕ ಡ್ರಗ್ಸ್) ಹಾಗೂ ಡ್ರಗ್ಸ್ ತಯಾರಿಸಲು ಬಳಸುತ್ತಿದ್ದ ರಸಾಯನಿಕ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ನೈಜೀರಿಯಾ ಮೊಗಾಂಬಿಕ ದೇಶದ ಡೇವಿಡ್ ಜೊ ಮಲವೇ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಏನಿದು ಘಟನೆ?
2018ರಲ್ಲಿ ಡೇವಿಡ್ ಭಾರತಕ್ಕೆ ಬಂದು ಸಹೋದರನೊಂದಿಗೆ ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ನಂತರ ಇದೇ ಫೆಬ್ರವರಿಯಲ್ಲಿ ಕಳೆದ ಬೆಂಗಳೂರಿಗೆ ಬಂದಿದ್ದ. ಅನೇಕಲ್ ಬಳಿಯ ಬೆಟ್ಟದಾಸನಪುರ ಬಳಿ ಬಂದು ಮನೆ ಬಾಡಿಗೆ ಪಡೆದಿದ್ದ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಮನೆ ಮಾಲೀಕರನ್ನು ನಂಬಿಸಿದ್ದ.
ಎಂಡಿಎಂ ಕ್ರಿಸ್ಟೆಲ್ಗಳನ್ನು ತಯಾರಿಸಲು ಬಳಸುತ್ತಿದ್ದ ಜೀವಹಾನಿಕಾರಕ ಆ್ಯಸಿಡ್, ಸೋಡಿಯಂ ಹೈಡ್ರಾಕ್ಸೈಡ್ ಹಾಗೂ ತಯಾರು ಮಾಡಲು ಬೇಕಾಗುವ ಉಪಕರಣಗಳಾದ ಮೆಶ್ಯೂರಿಂಗ್ ಸಿಲಿಂಡರ್ ಪ್ಲಾಸ್ಟಿಕ್, ಫ್ಲಾಸ್ಕ್ ಬೋಯಲಿಂಗ್ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ನಗರದ ರಸಾಯನಿಕ ಅಂಗಡಿ ಹಾಗೂ ಆನ್ ಲೈನ್ ಮಾರ್ಕೆಟ್ ಗಳಿಂದ ಖರೀದಿಸಿ ಮನೆಯಲ್ಲಿ ಶೇಖರಿಸಿಕೊಂಡಿದ್ದ. ಬಳಿಕ ಒಬ್ಬನೇ ಎಂಡಿಎಂ ಡ್ರಗ್ಸ್ ತಯಾರು ಮಾಡುತ್ತಿದ್ದ.
ನಂತರ ದೇಶ ವಿದೇಶಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಆರೋಪಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಆರೋಪಿ ಬಂಧಿಸಿದ್ದು ಹೇಗೆ ?
ಇತ್ತೀಚೆಗೆ ಡ್ರಗ್ಸ್ ಪ್ರಕರಣವೊಂದರಲ್ಲಿ ನೈಜಿರಿಯಾ ಪ್ರಜೆಯನ್ನು ಬಾಣಸವಾಡಿಯಲ್ಲಿ ಬಂಧಿಸಿದ್ದರು. ಈತನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡೇವಿಡ್ ನೊಂದಿಗೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಮಾರಾಟದ ಕುರಿತಂತೆ ಡೇವಿಡ್ ಡಗ್ಸ್ ಫೆಡ್ಲರ್ ವಿಡಿಯೊ ಕಳುಹಿಸಿದ್ದ. ಇದರ ಬೆನ್ನತ್ತಿದ್ದ ಸಿಸಿಬಿ ಎಸಿಪಿ ಗೌತಮ್ ನೇತೃತ್ವದ ತಂಡ ತಾಂತ್ರಿಕ ತನಿಖೆ ನಡೆಸಿ ಆರೋಪಿ ವಾಸ್ತವ್ಯ ಹೂಡಿದ್ದ ಮನೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ..
ಶೂನಲ್ಲಿ ಡ್ರಗ್ಸ್ ಇಟ್ಟು ಕೊರಿಯರ್ ಮಾಡುತ್ತಿದ್ದ:
ಹಲವು ವರ್ಷಗಳಿಂದ ದಂಧೆ ನಡೆಸುತ್ತಿದ್ದ ಆರೋಪಿ ಯಾರಿಗೂ ಅನುಮಾನ ಬರದಂತೆ ಶೂ ಕೆಳ ಭಾಗದಲ್ಲಿ ಎಂಡಿಎಂ ಕ್ರಿಸೆಲ್ಟ್ ಇಟ್ಟು ಗೊತ್ತಾಗದಂತೆ ಪ್ಯಾಕ್ ಮಾಡಿ ಕೊರಿಯರ್ ಮುಖಾಂತರ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಗೆ ಸರಬರಾಜು ಮಾಡುತ್ತಿದ್ದ. ಗ್ರಾಹಕರು ನೀಡಿದ ಹಣವನ್ನು ದೆಹಲಿಯಲ್ಲಿರುವ ಸಹೋದರನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.