ಬೆಂಗಳೂರು: ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ತಲುಪಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಲೇ ಇದೆ. ಅಂತೆಯೇ ಬೆಂಗಳೂರು ಪೊಲೀಸರು ಜನರನ್ನು ತಲುಪಲು ನೂತನ ಪ್ರಯತ್ನವೊಂದನ್ನು ಮಾಡಿದ್ದು, ಸಾರ್ವಜನಿಕರಿಂದ ಭಾರಿ ಬೆಂಬಲ ಸಿಕ್ಕಿದೆ.
ಟಿಕ್ಟಾಕ್ ಈಗ ಎಲ್ಲೆಡೆ ಪ್ರಚಲಿತವಾಗಿ ಚಾಲ್ತಿಯಲ್ಲಿರುವ ಸಾಮಾಜಿಕ ಜಾಲತಾಣ. ಅಂತೆಯೇ ಬೆಂಗಳೂರು ಪೊಲೀಸರು ಟಿಕ್ಟಾಕ್ಗೆ ಎಂಟ್ರಿ ಕೊಟ್ಟಿದ್ದಾರೆ. ನಗರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವನ್ನ ಟಿಕ್ಟಾಕ್ ನಲ್ಲಿ ಹಾಕಲಿದ್ದಾರೆ. ಟಿಕ್ಟಾಕ್ನಲ್ಲಿ ಬೆಂಗಳೂರು ಪೊಲೀಸರನ್ನು 25 ಸಾವಿರಕ್ಕೂ ಹೆಚ್ಚು ಜನ ಫಾಲೋ ಮಾಡ್ತಿದ್ದಾರೆ.
ದೇಶದಲ್ಲಿ ಬೆಂಗಳೂರು ಪೊಲೀಸರು ಮೊದಲ ಬಾರಿಗೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಪೊಲೀಸರು ನಡೆಸುವ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಲು ಹೊಸ ಯತ್ನ ಇದಾಗಿದೆ. ಮೂರು ವಿಡಿಯೋಗಳನ್ನು ಶೇರ್ ಕೂಡ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದು, ಬೆಂಗಳೂರು ಪೊಲೀಸರು ಸೋಷಿಯಲ್ ಮಿಡಿಯಾವನ್ನು ಪವರ್ಫುಲ್ ಎಂದು ನಂಬಿದ್ದಾರೆ. ಜನರ ಜೊತೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಹೀಗಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.