ಬೆಂಗಳೂರು: ಪ್ರಸ್ತುತ ಬಿಬಿಎಂಪಿಯಲ್ಲಿ ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್) ಕಾಯ್ದೆ ತೆಗೆದುಹಾಕಿ, ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ನಗರಕ್ಕೆ ಪ್ರತ್ಯೇಕವಾದ ಕಾಯ್ದೆ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ನಗರಕ್ಕೆ ಕೆಎಂಸಿ ಕಾಯ್ದೆಗಿಂತ ಎತ್ತರದ ಕಾಯ್ದೆ ಬೇಕಾಗಿದೆ. ಈಗಾಗಲೇ ಈ ಕುರಿತ ಬಿಲ್ ಮಂಡನೆಯಾಗಿದ್ದು, ಸೆಲೆಕ್ಟ್ ಕಮಿಟಿಗೆ ವರ್ಗಾವಣೆಯಾಗಿದೆ. ಆ ಸಮಿತಿಯಲ್ಲಿ ಎಲ್ಲಾ ಪಕ್ಷದವರಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಪಡೆದು ಕಾಯ್ದೆ ಮಂಡಿಸಲಾಗುತ್ತದೆ ಎಂದರು.
ಈ ಕಾಯ್ದೆ ಕಸದ ಮಾಫಿಯಾ ತಡೆಗಟ್ಟಲು, ಕಾನೂನು ಉಲ್ಲಂಘಿಸುವವರಿಗೆ, ಹೆಚ್ಚು ತೆರಿಗೆ ವಿಧಿಸುವವರಿಗೆ ಅನುಕೂಲವಾಗುತ್ತದೆ. ಮುಂಬೈ, ಕೋಲ್ಕತ್ತಾ ನಗರಗಳ ಕುರಿತು ಅಧ್ಯಯನ ಮಾಡಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.