ಬೆಂಗಳೂರು: ಶಾಲೆಗಳ ಪುನಾರಂಭ ಸದ್ಯಕ್ಕಿಲ್ಲ. ಶಾಲೆಗಳ ಆರಂಭದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೇರಿದಂತೆ ಇತರೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಘಳಿಗೆವರೆಗೂ ಶಾಲೆ ಆರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.
ಶಾಲೆಗಳ ಪುನಾರಂಭದ ಕುರಿತು ಮಾಹಿತಿ ಸಂಗ್ರಹಣೆ ಮಾಡಬೇಕಿದೆ. ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭವಾಗಿದ್ದು, ಅಲ್ಲಿ ನಡೆಯುತ್ತಿರುವ ಪರಿಸ್ಥಿತಿ ಅವಲೋಕನ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ಆಯುಕ್ತರು ಮುಂದಿನ 2 ದಿನಗಳ ಕಾಲ ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ, ರಾಜ್ಯದ ಎಲ್ಲ ತಾಲೂಕುಗಳ ಎಸ್ಡಿಎಂಎಸಿ, ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಚರ್ಚೆಯ ಆಧಾರದ ಮೇಲೆ ವರದಿ ಸಲ್ಲಿಕೆಯ ನಂತರವಷ್ಟೇ ಶಾಲೆ ಆರಂಭದ ಕುರಿತು ಮಾಹಿತಿ ನೀಡಲಾಗುತ್ತೆ. ಇನ್ನು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರ ಚೆನ್ನಮ್ಮ ಶಾಲೆ, ಆಶ್ರಮ ಶಾಲೆಗಳ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತೆ. ಇವತ್ತು ಶಾಲೆಗಳ ಶಿಕ್ಷಕರ ಸಂಘದೊಂದಿಗೆ ಚರ್ಚೆಯಾಗಿದ್ದು, ಮೈಸೂರಿನಲ್ಲಿ, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನದ ಖಾಸಗಿ ಶಾಲೆಗಳ ಪ್ರತಿನಿಧಿಗಳು ಚರ್ಚೆ ಮಾಡುತ್ತಿದ್ದಾರೆ. ಅವರ ಅಭಿಪ್ರಾಯವನ್ನ ಸ್ವೀಕರಿಸಲಾಗುತ್ತೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲ ವರದಿಯನ್ನೂ ಇನ್ನು 4 ದಿನಗಳಲ್ಲಿ ತಯಾರಿ ಮಾಡುತ್ತಾರೆ. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಗ್ರಹದ ವರದಿ ನೀಡಲಾಗುತ್ತೆ. ಮುಂದಿನ ಹೆಜ್ಜೆ, ಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುತ್ತೆ ಎಂದು ಸಚಿವರು ವಿವರಿಸಿದರು.
ಮಳೆ ಹಾನಿ ಪ್ರದೇಶದಲ್ಲಿ ಶಾಲೆ ಆರಂಭ ವಿಚಾರವಾಗಿಯೂ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ಆಯುಕ್ತರಿಂದ ವರದಿ ಸಂಗ್ರಹ ಮಾಡಲಾಗುತ್ತೆ. ಎಲ್ಲೆಲ್ಲಿ ಹಾನಿಯಾಗಿದೆ?. ಪರಿಸ್ಥಿತಿ ಹೇಗಿದೆ ಎಂಬುದರ ನಂತರ ತೀರ್ಮಾನ ಮಾಡಲಾಗುತ್ತೆ ಎಂದರು.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ...
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತು ಮಾತಾನಾಡಿದ ಅವರು, ಬೇರೆ ಬೇರೆ ಕಾರಣದಿಂದ ಈ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿತ್ತು. ಕಳೆದ ಬಾರಿ ಆರಂಭಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿ ಬಂತು. ಇವತ್ತು ಇದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಚುನಾವಣಾ ನೀತಿಸಂಹಿತೆ ಅವಧಿ ಮುಗಿದ ತಕ್ಷಣವೇ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ಜೊತೆಗೆ ಚರ್ಚಿಸಿ ಪ್ರಕ್ರಿಯೆ ದಿನಾಂಕ ಘೋಷಣೆ ಮಾಡಲಾಗುವುದು. ಅಗತ್ಯ ಪೂರ್ವಭಾವಿ ಕ್ರಮ ಕೈಗೊಳ್ಳಲಾಗುತ್ತೆ. ಪ್ರಾಥಮಿಕ-ಪ್ರೌಢ ಶಿಕ್ಷಣ ಅಷ್ಟೆಲ್ಲದೇ, ಪದವಿ ಪೂರ್ವ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಕೂಡ ಸ್ಥಗಿತಗೊಂಡಿತ್ತು. ಇವತ್ತಿನ ಚರ್ಚೆಯ ನಂತರ ಪಿಯು ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಪ್ರಾಂಶುಪಾಲರ ಹುದ್ದೆಗೆ ಪದನ್ನೋತ್ತಿ ಬಳಿಕ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಶುರು ಆಗಲಿದೆ ಎಂದರು.
ಸರ್ಕಾರಿ ಶಾಲೆ ಮಕ್ಕಳಿಗೆ ಆನ್ಲೈನ್ ಕ್ಲಾಸ್...
ಕಳೆದ ಎಸ್ಎಸ್ಎಲ್ಸಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಿದ್ದರು. ಶಿಕ್ಷಕರು ಚಂದನ ವಾಹಿನಿ ಬಳಸಿಕೊಂಡು ಪಾಠಗಳನ್ನು ಮಾಡಿದ್ದಾರೆ. 8, 9, 10, ತರಗತಿಗಳಿಗೆ ಸಂವೇದ ಹೆಸರಲ್ಲಿ ಪಾಠ ಮಾಡಲಾಗುತ್ತಿದೆ. ಡಿಸೆಂಬರ್ ಒಳಗೆ ಪಾಠ ಮುಕ್ತಾಯವಾಗುತ್ತೆ. 1 ರಿಂದ 7ನೇ ತರಗತಿ ಮಕ್ಕಳಿಗೆ ಆಕಾಶವಾಣಿ ಹಾಗೂ ದೂರದರ್ಶನದಲ್ಲೂ ಪಾಠ ಮಾಡಲಾಗುತ್ತಿದೆ. ವಿದ್ಯಾಗಮ ಯೋಜನೆ ಪುನಾರಂಭದ ಕುರಿತು ಸದ್ಯಕ್ಕೆ ಆಯವುದೇ ತೀರ್ಮಾನ ಆಗಿಲ್ಲವೆಂದು ಸಚಿವರು ಮಾಹಿತಿ ನೀಡಿದರು.