ಬೆಂಗಳೂರು: ಅನಧಿಕೃತವಾಗಿ ಪಟಾಕಿ ಮಳಿಗೆ ಇಡಲು ಅನುಮತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಜೀವನ್ ಭೀಮಾನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಸವರಾಜ್ ಅವರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಜಿ.ಬಿ.ನಗರ ಪೊಲೀಸ್ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಬಸವರಾಜ್ ಅವರು ಅಧಿಕಾರ ಸ್ವೀಕರಿಸಿದ್ದರು. ದೀಪಾವಳಿ ಹಿನ್ನೆಲೆಯಲ್ಲಿ ನಗರದಲ್ಲಿ ಅನಧಿಕೃತವಾಗಿ ಪಟಾಕಿ ಮಳಿಗೆ ಮಾಲೀಕರಿಗೆ ಮಾರಾಟಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಕಾನೂನುಬಾಹಿರವಾಗಿ ಪಟಾಕಿ ಮಾರಾಟ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಯುಕ್ತರು ತಾಕೀತು ಮಾಡಿದ್ದರು.
ಜೀವನಭೀಮಾನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅನುಮತಿ ಇಲ್ಲದೇ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಕಂಡುಬಂತು. ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಇನ್ಸ್ಪೆಕ್ಟರ್ ಬಸವರಾಜ್ ಅವರು ನಿರ್ಲಕ್ಷ್ಯವಹಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನ ಸಸ್ಪೆಂಡ್ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇತ್ತೀಚಿನ ಘಟನೆ: ಮಾರಕಾಸ್ತ್ರ ಹಿಡಿದು ಯುವಕರಿಬ್ಬರ ಮೇಲೆ ಹಲ್ಲೆ ಮಾಡಿದ್ದ ಮಾಗಡಿ ರೋಡ್ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಅವರನ್ನ ಅಮಾನತುಗೊಳಿಸಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಆದೇಶ ಹೊರಡಿಸಿದ್ದರು. ಅ.25ರಂದು ರಾತ್ರಿ ವಿಜಯ ನಗರದ ಆರ್.ಪಿ.ಸಿ ಲೇಔಟ್ 6ನೇ ಮುಖ್ಯರಸ್ತೆಯಲ್ಲಿ ದಯಾನಂದ್ ಹಾಗೂ ಶಶಿಧರ್ ಎಂಬುವವರ ಮೇಲೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಹಲ್ಲೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕರ್ತವ್ಯ ಲೋಪ ಇನ್ಸ್ಪೆಕ್ಟರ್ ಸಸ್ಪೆಂಡ್: ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ ಹಿನ್ನೆಲೆ ಹಲಸೂರು ಇನ್ಸ್ಪೆಕ್ಟರ್ ಪ್ರಕಾಶ್ ಅವರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದ ಘಟನೆ ಕೆಲ ಹಿನದಗಳ ಹಿಂದೆ ನಡೆದಿತ್ತು. ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಕೂಡ ಅಮಾನತುಗೊಳಿಸಲಾಗಿತ್ತು.
ಸಸ್ಪೆಂಡ್ ಆದ ಇನ್ಸ್ಪೆಕ್ಟರ್ ಪ್ರಕಾಶ್ ಗಾಂಜಾ ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ್ದ ವಾಹನವನ್ನು ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಜತೆ ಶಾಮೀಲಾಗಿದ್ದರು ಎಂಬ ಆಪಾದನೆಯೂ ಇತ್ತು. ಈ ಸಂಬಂಧ ಪ್ರಕಾಶ್ ವಿರುದ್ಧ ದೂರು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ಪೊಲೀಸ್ ಆಯುಕ್ತರು ಸೂಚಿಸಿದ್ದರು. ತನಿಖೆಯಲ್ಲಿ ಪ್ರಕಾಶ್ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿತ್ತು.
ಇದನ್ನೂ ಓದಿ: ಫೇಮಸ್ ಆಗಲೆಂದು ಗೊಂಬೆ ಮುಖವಾಡ ಧರಿಸಿ ವಾಹನಗಳ ಗಾಜು ಜಖಂಗೊಳಿಸಿದ್ದ ಐವರು ಕಿಡಿಗೇಡಿಗಳ ಬಂಧನ