ಬೆಂಗಳೂರು: ನಾಯಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಫಾಜಿಲ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಕರಕಲಾಗಿವೆ.
ಶನಿವಾರ ರಾತ್ರಿ ಅವಘಡ ಸಂಭವಿಸಿದ್ದು ಕ್ಷಣಾರ್ಧದಲ್ಲಿ ಸಂಪೂರ್ಣ ಫ್ಯಾಕ್ಟರಿ ಅಗ್ನಿಗಾಹುತಿಯಾಗಿದೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ನಾಗರಬಾವಿ ವಿಭಾಗದ 8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಮುಂದಾಗಿವೆ. 48 ಮಂದಿ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಹರಸಾಹಸಪಟ್ಟು ಕೊನೆಗೂ ಬೆಂಕಿ ನಂದಿಸುವಲ್ಲಿ ಯಶ್ವಿಯಾಗಿದ್ದಾರೆ.
ಪ್ಲಾಸ್ಟಿಕ್ ಫ್ಯಾಕ್ಟರಿ ಪಕ್ಕದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ನಲ್ಲಿ ಮೊದಲು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರ್ಖಾನೆಗೆ ಬೆಂಕಿ ತಗುಲಿದೆ. ಇದಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪದೇ-ಪದೆ ವಿದ್ಯುತ್ ಕಂಬಗಳಿಂದ ಇಂತಹ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ಕ್ರಮ ವಹಿಸಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.