ಬೆಂಗಳೂರು: ಕೇರಳದಿಂದ ನಗರಕ್ಕೆ ಬಂದು ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದ ಮಲಯಾಳಿ ಕಿರುತೆರೆ ನಟ ಸೇರಿ ಮೂವರನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಟ ಶಿಯಾಜ್ ಮತ್ತು ಸಹಚರರಾದ ಮೊಹಮ್ಮದ್ ಶಾಹಿದ್ ಹಾಗೂ ಮಂಗಲ್ ತೋಡಿ ಜಿತೀನ್ ಬಂಧಿತರು. ಆರೋಪಿಗಳಿಂದ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಯಾಜ್ ಮಲಯಾಳಂ ಕಿರುತೆರೆಯಲ್ಲಿ ಸಹನಟನಾದರೆ ಮೊಹಮ್ಮದ್ ಶಾಹಿದ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಆರೋಪಿಗಳು ಹೆಚ್ಎಸ್ಆರ್, ಕೋರಮಂಗಲ ಭಾಗದಲ್ಲಿನ ಪ್ರತಿಷ್ಠಿತ ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಡ್ರಗ್ ವ್ಯವಹಾರ ನಡೆಸುತ್ತಿದ್ದರು. ಕೇರಳದಿಂದ ಗಾಂಜಾ ಮತ್ತು ಎಂಡಿಎಂಎ ತರಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.
ಇವರ ಜೊತೆಗೆ ಹೈಫೈ ಪಾರ್ಟಿಗಳಿಗೂ ಈ ಗಾಂಜಾ ಮತ್ತು ಎಂಡಿಎಂಎ ಅನ್ನು ಸಪ್ಲೈ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 191 ಗ್ರಾಂ ಎಂಡಿಎಂಎ ಹಾಗೂ 2.80ಕೆಜಿ ಗಾಂಜಾ ಸೀಜ್ ಮಾಡಿ ಹೆಚ್ಎಸ್ಆರ್ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: ತಾಯಿ ಅಗಲಿಕೆ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಇನ್ಸ್ಪೆಕ್ಟರ್: ಕುಖ್ಯಾತ ಕಳ್ಳನ ಬಂಧಿಸಿದ ಪಿಐ ಕಾರ್ಯಕ್ಕೆ ಮೆಚ್ಚುಗೆ