ಬೆಂಗಳೂರು: ವೈವಾಹಿಕ ಜಾಲತಾಣ ಮ್ಯಾಟ್ರಿಮೋನಿಯಲ್ಲಿ ವಧುವನ್ನು ಹುಡುಕಲು ಹೊರಟ ಯುವಕನೊಬ್ಬನಿಗೆ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತರು 1 ಲಕ್ಷ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀಕೃಷ್ಣನಗರದ ನಿವಾಸಿ ವಿನಾಯಕ ಭಟ್ ಹಣ ಕಳೆದುಕೊಂಡ ಯುವಕ. ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ವಿನಾಯಕ ಭಟ್ ಮ್ಯಾಟ್ರಿಮೋನಿಯಲ್ಲಿ ಜಾಲತಾಣದಲ್ಲಿ ಖಾತೆ ಹೊಂದಿದ್ದರು. ಅದರಲ್ಲಿ ಕೆಲವೊಂದು ಯುವತಿಯರಿಗೆ ರಿಕ್ವೆಸ್ಟ್ ಕಳಿಸಿದ್ದರು.
ಕಳೆದ ಫೆ.17ರಂದು ವಿನಾಯಕ್ಗೆ ಅಪರಿಚಿತರು ಕರೆ ಮಾಡಿ ನಾವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ನೀವು ಮ್ಯಾಟ್ರಿಮೋನಿಯ ವೆಬ್‌ಸೈಟ್‌ನಲ್ಲಿ ರಿಕ್ವೆಸ್ಟ್ ಕಳಿಸಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನೀವು ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಪ್ರಕರಣ ಮುಕ್ತಾಯಗೊಳಿಸುತ್ತೇವೆ ಎಂದು ನಂಬಿಸಿದ್ದರು.
ಇದನ್ನು ನಂಬಿದ ವಿನಾಯಕ್ ಒಂದು ಕ್ಷಣ ಆತಂಕಗೊಂಡ ಹಂತ-ಹಂತವಾಗಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗೆ 1 ಲಕ್ಷ ರೂ.ನ್ನು ಆನ್‌ಲೈನ್ ಮೂಲಕ ಜಮಾ ಮಾಡಿದ್ದರು. ಇದಾದ ಬಳಿಕ ಅಪರಿಚಿತರು ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗ ತಾವು ಮೋಸ ಹೋದ ಸಂಗತಿ ಅರಿತ ವಿನಾಯಕ್ ಈ ಕುರಿತು ದಕ್ಷಿಣ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಖಾತೆ ತೆರೆದು ಇದೇ ಮಾದರಿಯಲ್ಲಿ ಹಲವು ಜನರಿಗೆ ಕರೆ ಮಾಡಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ವಿನಾಯಕ್ ಆರೋಪಿಗಳಿಗೆ ಹಣ ಜಮೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.