ಬೆಂಗಳೂರು: ತಮಿಳುನಾಡಿನ ರಾಜಕೀಯ ಪಕ್ಷದ ಮುಖಂಡ, ರೌಡಿಶೀಟರ್ ಹಿನ್ನೆಲೆಯ ವಿ. ಕೆ. ಗುರುಸ್ವಾಮಿ (64) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗಾಗಿ ಬಾಣಸವಾಡಿ ಠಾಣಾ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹಲ್ಲೆಗೊಳಗಾದ ಗುರುಸ್ವಾಮಿ ಕುರಿತ ಮಾಹಿತಿ ಕಲೆಹಾಕಲು ಹಾಗೂ ಆರೋಪಿಗಳನ್ನ ಪತ್ತೆ ಹಚ್ಚಲು ಪ್ರತ್ಯೇಕ ತಂಡಗಳನ್ನ ರಚಿಸಲಾಗಿದ್ದು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಗುರುಸ್ವಾಮಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಲವು ರಾಜಕೀಯ ಮುಖಂಡರ ಆಪ್ತನಾಗಿ ಗುರುತಿಸಿಕೊಂಡಿರುವ ಅವರು, ಅಪರಾಧ ಹಿನ್ನೆಲೆಯನ್ನೂ ಹೊಂದಿದ್ದಾರೆ. ಇವರ ವಿರುದ್ಧ ಕಿರುತರೈ ಠಾಣೆಯಲ್ಲಿ ರೌಡಿಶೀಟ್ ಸಹ ಇದ್ದು, ಎಂಟು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ಗ್ಯಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಹಲ್ಲೆಗೊಳಗಾದ ಗುರುಸ್ವಾಮಿ ಅವರು ಸೋಮವಾರ ವ್ಯವಹಾರದ ಮೇಲೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದರು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಸುಖಸಾಗರ್ ಹೊಟೇಲ್ನಲ್ಲಿ ಸೋಮವಾರ ಸಂಜೆ 4 ರ ಸುಮಾರಿನಲ್ಲಿ ಟೀ ಕುಡಿಯಲು ಹೋಗಿದ್ದಾಗ ದುಷ್ಕರ್ಮಿಗಳ ಗುಂಪು ದಾಳಿ ಮಾಡಿತ್ತು.
ಇಲ್ಲಿನ ಮಧ್ಯವರ್ತಿಯೊಬ್ಬರ ಮೂಲಕ ವ್ಯವಹಾರಿಕ ಸಂಬಂಧವಾಗಿ ಭಾನುವಾರ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದರು. ಇವರ ಚಲನವಲನವನ್ನು ಅರಿತಿದ್ದ ಐವರು ಆರೋಪಿಗಳ ಗ್ಯಾಂಗ್, ತಮಿಳುನಾಡು ನೋಂದಣಿ ಇರುವ ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಗುರುಸ್ವಾಮಿ ಅವರ ತಲೆ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆಗೊಳಗಾದ ಗುರುಸ್ವಾಮಿ ವಿರುದ್ಧ ಮಧುರೈ ಸೇರಿದಂತೆ ತಮಿಳುನಾಡಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 20ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 2002ರಿಂದ ಈತನ ವಿರೋಧಿ ಗ್ಯಾಂಗ್ ವೈಷಮ್ಯ ಬೆಳೆಸಿಕೊಂಡಿದ್ದು, 2002 ರಲ್ಲಿ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಗುರುಸ್ವಾಮಿ ಭಾಗಿಯಾಗಿದ್ದ ಎಂಬ ಮಾಹಿತಿ ಸಿಕ್ಕಿದೆ.
ಹೀಗಾಗಿ ಗುರುಸ್ವಾಮಿ ಹಾಗೂ ವಿರೋಧಿ ಪಡೆಯ ಗ್ಯಾಂಗ್ ವಾರ್ ನಡೆಯುತ್ತಿತ್ತು. ಎರಡು ದಿನಗಳ ಹಿಂದಷ್ಟೇ ಮಧುರೈನ ಸ್ಥಳೀಯ ನ್ಯಾಯಾಲಯಕ್ಕೆ ಕೊಲೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಗುರುಸ್ವಾಮಿ ಬೆಂಗಳೂರಿಗೆ ಬಂದಿರುವುದನ್ನು ಅರಿತ ವಿರೋಧಿ ಗ್ಯಾಂಗ್ ಕೃತ್ಯವೆಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ಹಳೆ ವೈಷಮ್ಯ ಹಿನ್ನೆಲೆ; ತಮಿಳುನಾಡು ಮೂಲದ ವ್ಯಕ್ತಿ ಮೇಲೆ ಟೀ ಕುಡಿಯುತ್ತಿರುವಾಗಲೇ ಮಾರಕಾಸ್ತ್ರಗಳಿಂದ ಅಟ್ಯಾಕ್