ಬೆಂಗಳೂರು : ಕುಟುಂಬಸ್ಥರೆಲ್ಲ ಧರ್ಮಸ್ಥಳಕ್ಕೆ ತೆರಳಿದ್ದಾಗ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 13ರಂದು ಮುಂಜಾನೆ ಭೈರವೇಶ್ವರ ನಗರದ ಶೆಟ್ಟಿಹಳ್ಳಿಯಲ್ಲಿ ಶಾಂತಾಬಾಯಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ ರವಿ (36), ಇಮ್ರಾನ್ (28) ಹಾಗೂ ಜೈಕುಮಾರ್ (39) ಬಂಧಿತ ಆರೋಪಿಗಳು.
ಶಾಂತಾಬಾಯಿ ಅವರ ಕುಟುಂಬ ಧರ್ಮಸ್ಥಳಕ್ಕೆ ತೆರಳಿದ್ದಾಗ ಬಾಗಿಲು ಒಡೆದು ಒಳಗೆ ನುಗ್ಗಿದ್ದ ಆರೋಪಿಗಳು ಚಿನ್ನಾಭರಣ ನಗದು ಕದ್ದು ಪರಾರಿಯಾಗಿದ್ದರು. ದರ್ಶನ ಮುಗಿಸಿ ವಾಪಾಸ್ ಬಂದಾಗ ಮನೆಯಲ್ಲಿ ಕಳ್ಳತವಾಗಿರುವುದನ್ನು ತಿಳಿದು ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದು, 6.45 ಲಕ್ಷ ಮೌಲ್ಯದ 129 ಗ್ರಾಂ ಚಿನ್ನಾಭರಣ, 1.08 ಲಕ್ಷ ನಗದು ಹಣ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕುಖ್ಯಾತ ಮನೆಗಳ್ಳನ ಬಂಧನ : ದಂಪತಿ ದೇವಸ್ಥಾನಕ್ಕೆ ತೆರಳಿದ್ದಾಗ ಹಾಡಹಗಲೇ ಅವರ ಮನೆಯಲ್ಲಿ ಚಿನ್ನಾಭರಣ, ನಗದು ದೋಚಿದ್ದ ಕುಖ್ಯಾತ ಕಳ್ಳನನ್ನ ಸಂಜಯನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸುಬ್ರತಾ ಮಂಡಲ್ (28) ಬಂಧಿತ ಆರೋಪಿ. ಆಗಸ್ಟ್ 27ರಂದು ಸಂಜಯ ನಗರದ ಪಟೇಲಪ್ಪ ಲೇಔಟಿನಲ್ಲಿರುವ ರಾಮಯ್ಯ ಶೆಟ್ಟಿ ಎಂಬುವವರ ಮನೆಯಿಂದ 2.50 ಲಕ್ಷ ನಗದು, ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದ.
ಮತ್ತಿಕೆರೆಯಲ್ಲಿ ವಾಸವಿದ್ದ ಆರೋಪಿ ಈ ಹಿಂದೆ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸಿ ಹೊರ ಬಂದಿದ್ದ. ಬಳಿಕ ತನ್ನ ದುಶ್ಚಟಗಳಿಗೆ ಹಣ ಹೊಂದಿಸುವ ಸಲುವಾಗಿ ಮನೆಗಳ್ಳತನ ಕೃತ್ಯಗಳನ್ನ ಆರಂಭಿಸಿದ್ದ. ಸಾಮಾನ್ಯವಾಗಿ ಬೇರೆ ಬೇರೆ ಏರಿಯಾಗಳಲ್ಲಿ ಸಂಚರಿಸುತ್ತಿದ್ದ ಆರೋಪಿ, ಗೇಟುಗಳಿಗೆ ಹ್ಯಾಂಗಿಂಗ್ ಲಾಕ್ ಹಾಕಿರುವ ಮನೆಗಳು ಕಾಣಿಸಿದರೆ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದ. ನಂತರ ಮನೆಯ ಬಾಗಿಲು ಒಡೆದು ಕೆಲವೇ ನಿಮಿಷಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.
ಇದೇ ರೀತಿ ಕೃತ್ಯ ಎಸಗಿದ್ದ ಆರೋಪಿಯನ್ನ ಸದ್ಯ ಸಿಟಿವಿ ದೃಶ್ಯಗಳನ್ನ ಆಧರಿಸಿ ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 10 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ, 75 ಸಾವಿರ ರೂ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
44 ಪ್ರಕರಣಗಳನ್ನು ಭೇದಿಸಿ ಚಾಮರಾಜನಗರ ಪೊಲೀಸರು : ಕಳೆದ 8 ತಿಂಗಳಿನಲ್ಲಿ ದಾಖಲಾಗಿದ್ದ 77 ವಿವಿಧ ಕಳವು ಪ್ರಕರಣಗಳಲ್ಲಿ 44 ಪ್ರಕರಣಗಳನ್ನು ಭೇದಿಸಿ 1.34 ಕೋಟಿ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ಮಂಗಳವಾರ ವಾರಸುದಾರರಿಗೆ ಚಾಮರಾಜನಗರ ಜಿಲ್ಲೆ ಪೊಲೀಸರು ಒಪ್ಪಿಸಿದ್ದ ಘಟನೆ ಮಂಗಳವಾರ ನಡೆದಿತ್ತು. 20 ಪ್ರಕರಣಗಳಲ್ಲಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ, 11 ಪ್ರಕರಣಗಳಲ್ಲಿ ವಾಹನಗಳು, 4 ಪ್ರಕರಣಗಳಲ್ಲಿ 10 ಲಕ್ಷ ನಗದು, 9 ಪ್ರಕರಣಗಳಲ್ಲಿ ತಾಮ್ರ-ಕಂಚಿನ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಒಟ್ಟು 44 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೌಲ್ಯ 1,34,46,261 ಕೋಟಿ ರೂ. ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು.
ಇದನ್ನೂ ಓದಿ : ಅನಧಿಕೃತ ರೈಲ್ವೆ ಟಿಕೆಟ್ ಬುಕ್ಕಿಂಗ್.. ಶಿವಮೊಗ್ಗದಲ್ಲಿ ಮೂವರು ಆರೋಪಿಗಳ ಬಂಧನ