ಬೆಂಗಳೂರು: ಕೋವಿಡ್ ರೋಗ ಹೆಚ್ಚಾಗಿ ಹರಡದಂತೆ ನಗರ ನೈರ್ಮಲ್ಯ ಕಾಪಾಡಲು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗ ಹೆಚ್ಚು ಶ್ರಮಿಸುತ್ತಿದೆ. ಪ್ರತಿನಿತ್ಯ ಮನೆಗಳಿಂದ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಸಿಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಜನ ರಾತ್ರಿ ಹೊತ್ತಲ್ಲಿ ರಸ್ತೆ ಬದಿ, ಬ್ಲಾಕ್ ಸ್ಪಾಟ್ಗಳಲ್ಲಿ ಕಸ ಎಸೆಯದಂತೆ ಮಾರ್ಷಲ್ಸ್ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ವಾರ್ಡ್ಗಳ ಕಸ ರಾಶಿ ಹಾಕುವ ಜಾಗಗಳನ್ನು ದಿನಕ್ಕೊಂದರಂತೆ ಸ್ವಚ್ಛ ಮಾಡಿ ಆ ಜಾಗದಲ್ಲಿ ರಂಗೋಲಿ ಹಾಕಿ ಕಸ ಹಾಕದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.
ಕಂಟೈನ್ಮೆಂಟ್ ವಲಯಗಳಲ್ಲಿ ಆದ್ಯತೆ ಮೇರೆಗೆ ನೈರ್ಮಲ್ಯ ಕಾಪಾಡಲಾಗುತ್ತಿದೆ. ಕಾಡುಗೋಡಿ, ಬಾಪೂಜಿನಗರ, ಕುವೆಂಪು ನಗರ, ಹನುಮಂತನಗರಗಳಲ್ಲಿ ಬ್ಲಾಕ್ ಸ್ಪಾಟ್ ತೆರವು ಮಾಡಿ ಸ್ವಚ್ಛಗೊಳಿಸಿದ ಫೋಟೋ, ವೀಡಿಯೋಗಳನ್ನು ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತರಾದ ಡಿ.ರಂದೀಪ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ.
ಇನ್ನೊಂದೆಡೆ ಹೈಕೋರ್ಟ್ ಚಾಟಿ ಬೀಸಿದ ಹಿನ್ನಲೆ ಹೊಸ ತ್ಯಾಜ್ಯ ಟೆಂಡರ್ ಸೆಪ್ಟೆಂಬರ್ ತಿಂಗಳಿಂದಲೇ ಅನುಷ್ಠಾನಗೊಳ್ಳಲಿದೆ. ಇದರಿಂದ ಕಸ ವಿಂಗಡಣೆ ಪ್ರಮಾಣ ಹೆಚ್ಚಾಗಿ, ಲ್ಯಾಂಡ್ ಫಿಲ್ಗಳಿಗೆ ತ್ಯಾಜ್ಯ ಸುರಿಯುವ ಪ್ರಮಾಣ ಕಡೆಯಾಗಲಿದೆ. ಕೋವಿಡ್ ಕಸ ಪ್ರತ್ಯೇಕ ಸಂಗ್ರಹ ಸಾಮಾನ್ಯ ಮನೆಗಳಿಂದ ಕಸ ತೆಗೆದುಕೊಳ್ಳುವಾಗ ಮೂರು ವಿಭಾಗ (ಹಸಿ, ಒಣ, ಸ್ಯಾಸಿಟರಿ ಕಸ) ಮಾಡಲಾಗುತ್ತಿದ್ದು, ಈಗ ಹೋಂ ಐಸೋಷೇನ್ನಲ್ಲಿರುವವರ ಮನೆಯಿಂದಲೂ ಕಸ ತೆಗೆದುಕೊಳ್ಳಲಾಗುತ್ತಿದೆ. ಕೋವಿಡ್ ಪಾಸಿಟಿವ್ ಬಂದು, ಹೋಂ ಐಸೋಲೇಷನ್ನಲ್ಲಿರುವವರ ಮನೆಯ ಕಸವನ್ನು ಸ್ಯಾನಿಟರಿ ಹಾಗೂ ಒಣಕಸವನ್ನು ಹಳದಿ ಬಣ್ಣದ ಬ್ಯಾಗ್ನಲ್ಲಿ ಹಾಕಿ ಅದರ ಮೇಲೆ ಸೋಡಿಯಂ ಹೈಪೋಕ್ಲೋರೈಡ್ ಸ್ಪ್ರೇ ಮಾಡಿ, ನಂತರ ಘನತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರೇ ಕಲೆಕ್ಟ್ ಮಾಡಲಿದ್ದಾರೆ.
ಸ್ಯಾನಿಟರಿ ವೇಸ್ಟ್ ಕಲೆಕ್ಷನ್ಗೆ ಬಯೋಮೆಡಿಕಲ್ ವೇಸ್ಟ್ ಕಲೆಕ್ಟರ್ಸ್ ಇದ್ದು, ಅವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾನ್ಯತೆ ಪಡೆದಿರ್ತಾರೆ. ಅವರ ಮೂಲಕ ವಿಲೇವಾರಿ ಮಾಡಲು ಮಾರ್ಗಸೂಚಿ ಇದೆ. ಹೀಗಾಗಿ ಪ್ರತೀ ವಾರ್ಡಲ್ಲೂ ಒಂದು ಆಟೋಟಿಪ್ಪರ್ ನಿಗದಿ ಮಾಡಿ, ಅವರು ಹೋಂ ಕ್ವಾರಂಟೈನ್ ಮನೆಯ ಕಸ ಎತ್ತಬೇಕು. ಅವರಿಗೆ ಪಿಪಿಇ ಕಿಟ್ ಕೊಡಲಾಗಿದೆ. ಈ ಹಳದಿ ಬ್ಯಾಗ್ಗಳನ್ನೂ ಪಾಲಿಕೆಯಿಂದ ಕೊಡಲಾಗುತ್ತದೆ. ಅದೇ ಬ್ಯಾಗ್ಗೆ ಕೋವಿಡ್ ವೇಸ್ಟ್ ಹಾಕುತ್ತಾರೆ.
ವಾರ್ಡ್ನಲ್ಲಿ ಒಂದು ಕಡೆ ಸಂಗ್ರಹ ಮಾಡಿ, ಅಲ್ಲಿಂದ ಬಯೋಮೆಡಿಕಲ್ ವೇಸ್ಟ್ ಕಲೆಕ್ಟ್ ಮಾಡುವವರು ತೆಗೆದುಕೊಂಡು ಹೋಗುತ್ತಾರೆ. ಹೋಂ ಐಸೋಲೇಷನ್ನಲ್ಲಿರುವವರ ಮನೆಯಿಂದ ಹತ್ತು ದಿನ ಈ ಕಸ ಸಂಗ್ರಹಿಸಲಾಗುತ್ತದೆ ಎಂದು ಡಿ.ರಂದೀಪ್ ತಿಳಿಸಿದರು.
ಈ ತರಹದ ಮನೆಗಳಿಂದ ಒಟ್ಟು 8 ಸಾವಿರ ಮನೆಗಳಿಂದ 50 ರಿಂದ 75 ಟನ್ ಕೋವಿಡ್ ಕಸ ಉತ್ಪತ್ತಿ ಆಗುತ್ತಿದ್ದು, ನೇರವಾಗಿ ತೆಗೆದುಕೊಂಡು ಹೋಗಿ ಸುಡಲಾಗುತ್ತಿದೆ ಎಂದರು.
ಎಲ್ಲಾ ಪೌರಕಾರ್ಮಿಕರಿಗೆ ಕೋವಿಡ್ ಟೆಸ್ಟ್ ಈಗಾಗಲೇ ನಗರದಲ್ಲಿ ಐನೂರಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಹೀಗಾಗಿ ಹೈಕೋರ್ಟ್ ಕೂಡ ಸೂಚನೆ ನೀಡಿದೆ. ಇದರ ಪ್ರಕಾರ ಕೊರೊನಾ ಲಕ್ಷಣ ಇರುವವರಿಗೆ ಆದ್ಯತೆ ಮೇರೆಗೆ ಹಾಗೂ ಎಲ್ಲಾ ಪೌರಕಾರ್ಮಿಕರಿಗೂ ಹಂತ ಹಂತವಾಗಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಬೇಕು. ಇದರಲ್ಲಿ ನೆಗೆಟಿವ್ ಬಂದರೆ ಗಂಟಲು ದ್ರವ ಪರೀಕ್ಷೆ ನಡೆಸಬೇಕು. ಕಡಿಮೆ ಸಿಮ್ಟಮ್ಸ್ ಇದ್ದರೆ ಹೋಂ ಐಸೋಲೇಷನ್, ಲಕ್ಷಣಗಳಿದ್ದರೆ ನಿಗದಿತ ಆಸ್ಪತ್ರೆಗೆ ದಾಖಲಿಸಿ, ಕರ್ತವ್ಯದ ಅವಧಿ ಎಂದು ಪರಿಗಣಿಸಿ ಪೂರ್ಣ ವೇತನ ನೀಡಬೇಕು ಎಂದು ವಿಶೇಷ ಆಯುಕ್ತರಾದ ರಂದೀಪ್ ಆದೇಶ ಹೊರಡಿಸಿದ್ದಾರೆ.
ಪೌರಕಾರ್ಮಿಕರಲ್ಲಿ ಹೆಚ್ಚಾದ ಆರೋಗ್ಯ ಕಾಳಜಿ
ಕೋವಿಡ್ಗೂ ಮೊದಲು ಮಾಸ್ಕ್, ಗ್ಲೌಸ್ ಧರಿಸಲು ನಿರ್ಲಕ್ಷ್ಯ ಮಾಡುತ್ತಿದ್ದ ಪೌರಕಾರ್ಮಿಕರು ಕೋವಿಡ್ ಬಳಿಕ ಜೀವ ಭಯದಿಂದ ಮಾಸ್ಕ್ ಹಾಗೂ ಗ್ಲೌಸ್, ಕೆಲವು ಕಡೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿದ್ದಾರೆ. ಆದರೂ ಐದಕ್ಕಿಂತ ಹೆಚ್ಚಿನ ಜನ ಮೃತಪಟ್ಟಿದ್ದು, ಐನೂರಕ್ಕೂ ಹೆಚ್ಚು ಮಂದಿಗೆ ಕೊರೊನಾ ಬಂದಿದೆ. ಸೋಂಕಿತ ಪೌರಕಾರ್ಮಿಕರು ಚಿಕಿತ್ಸೆ ಪಡೆಯುತ್ತಿರುವುದರಿಂದ ಅಕ್ಕ ಪಕ್ಕದ ಬೀದಿಯ ಪೌರಕಾರ್ಮಿಕರು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಆದರೆ ಮಾಸ್ಕ್, ಗ್ಲೌಸ್ ಕಾಲಕಾಲಕ್ಕೆ ವಿತರಿಸುತ್ತಿಲ್ಲ ಎಂದು ಇನ್ನೂ ಆರೋಪ ಇದೆ.
ಒಟ್ಟಿನಲ್ಲಿ ಕೋವಿಡ್ ಹಿನ್ನಲೆ ಕಸ ವಿಲೇವಾರಿಯಾಗದ ಸಮಸ್ಯೆಗಳು ಕಡಿಮೆ ಕೇಳಿ ಬಂದಿದೆ. ಜನರು ಸಾಮಾಜಿಕ ಜಾಲತಾಣದ ಮೂಲಕ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುವುದರಿಂದ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ.