ಬೆಂಗಳೂರು: ಯಾರಿಗೆ ಸೋಲುವ ಭಯ ಇರುತ್ತೋ ಅಂಥವರಿಗೆ ಗೆಲುವು ಸಿಗುವುದಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2020 ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕೆಲಸ ಇರಲಿ, ಶ್ರಮವಹಿಸಬೇಕು, ಸ್ಪರ್ಧೆಯಲ್ಲಿ ಭಾಗಿಯಾಗಬೇಕು, ಸೋಲು ಗೆಲುವು ನಂತರ ನಿರ್ಧಾರವಾಗುತ್ತದೆ. ಆದರೆ, ಯಾರಿಗೆ ಸೋಲುವ ಭಯ ಇರುತ್ತೋ ಅವರು ಗೆಲುವು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಭಯ ಇಲ್ಲದೇ ಮುನ್ನುಗ್ಗಿದರೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಈ ಹಿಂದೆ ಮುಂಬಯಿ ಪೊಲೀಸ್ ಅಂದರೆ ಹೆಸರುವಾಸಿ ಆಗಿತ್ತು. ಆದರೆ ಈಗ ಬೆಂಗಳೂರು ಪೊಲೀಸ್ ಆ ಸಾಧನೆ ಮಾಡಿದೆ. ದೇಶದಲ್ಲಿ ಎಲ್ಲರಿಗೂ ಸಿಂಹ ಸ್ವಪ್ನ ವಾಗಿದ್ದ ಕೇಸ್ ಗಳನ್ನು ನಮ್ಮ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರೊಂದಿಗೆ ಬೆಂಗಳೂರು ಪೊಲೀಸ್ ಈಗ ದೇಶದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಓದಿ : ನನ್ನ ಕ್ಷೇತ್ರದ ಮಹಿಳೆಯರಿಗೆ ಎಲ್ಲ ರೀತಿಯ ಸವಲತ್ತು ಒದಗಿಸಲು ಸಿದ್ಧ : ಸಚಿವ ಕೆ ಗೋಪಾಲಯ್ಯ
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲಪಂತ್ ಅತ್ಯಂತ ದಕ್ಷ ಅಧಿಕಾರಿ, ಅವರ ನೇತೃತ್ವದಲ್ಲಿ ಹಲವಾರು ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವ ಬೊಮ್ಮಾಯಿ ಪ್ರಶಸ್ತಿ ಮತ್ತು ಬಹುಮಾನ ವಿತರಿಸಿದರು. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.