ಬೆಂಗಳೂರು: 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಆರ್.ಆರ್ ನಗರ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಜಿ.ಹೆಚ್.ರಾಮಚಂದ್ರ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್.ಅಶೋಕ್, ಆರ್.ಆರ್ ನಗರ ಅಭ್ಯರ್ಥಿ ಮುನಿರತ್ನ ಸಮ್ಮುಖದಲ್ಲಿ ಜಿ.ಹೆಚ್.ರಾಮಚಂದ್ರ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿ ಸೇರಿದರು.
2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರಾಮಚಂದ್ರ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರೂ 60,360 ಮತಗಳನ್ನು ಪಡೆದಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ 1,08,064 ಮತ ಪಡೆದು ಗೆದ್ದರೆ, ಬಿಜೆಪಿಯ ತುಳಸಿ ಮುನಿರಾಜುಗೌಡ 82,572 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು.
ಇದೀಗ ಮುನಿರತ್ನ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಬಂಡಾಯವಾಗಿ ಕಣಕ್ಕಿಳಿಯದೆ ಪಕ್ಷಕ್ಕೆ ಬೆಂಬಲ ನೀಡಿದ್ದು, ಇದೀಗ ಜೆಡಿಎಸ್ ಅಭ್ಯರ್ಥಿ ಆಗಿದ್ದ ರಾಮಚಂದ್ರ ಕೂಡ ಮುನಿರತ್ನ ಪರ ನಿಂತಿದ್ದಾರೆ. ಹೀಗಾಗಿ ಕಳೆದ 2018ರ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಒಟ್ಟಾಗಿ ಒಂದೇ ಪಕ್ಷದ ಜೊತೆ ಗುರುತಿಸಿಕೊಂಡಿರುವುದು ಅಪರೂಪದ ವಿದ್ಯಮಾನವಾಗಿದೆ.
ಗೆಲುವಿನ ಲೆಕ್ಕಾಚಾರ:
ಮುನಿರತ್ನ ಪರ ಬಿಜೆಪಿಯ ಮತಗಳು ಸಂಪೂರ್ಣವಾಗಿ ಬರಲಿವೆ. ಕಾಂಗ್ರೆಸ್ನ ಮತಗಳು ಬಾರದಿದ್ದರೂ ವೈಯಕ್ತಿಕ ವರ್ಚಸ್ಸಿನ ಮತಗಳು ಬರಲಿವೆ. ಇದರ ಜೊತೆಗೆ ಜೆಡಿಎಸ್ ಪರಾಜಿತ ಅಭ್ಯರ್ಥಿ ರಾಮಚಂದ್ರ ಪರ ಇರುವ ಮತಗಳು ಬಂದರೆ ಅನಾಯಾಸವಾಗಿ ಗೆಲ್ಲಬಹುದು ಎನ್ನುವುದು ಮುನಿರತ್ನ ಲೆಕ್ಕಾಚಾರವಾಗಿದೆ.
ಅಮೂಲ್ಯ ಪ್ರಚಾರ:
ಕಳೆದ ಚುನಾವಣೆಯಲ್ಲಿ ಮಾವ ರಾಮಚಂದ್ರ ಪರ ನಟಿ ಅಮೂಲ್ಯ ಚುನಾವಣಾ ಪ್ರಚಾರ ನಡೆಸಿದ್ದರು. ಈ ಬಾರಿ ರಾಮಚಂದ್ರ ಬಿಜೆಪಿ ಸೇರಿದ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮಾವ ಹಾಗೂ ಸೊಸೆ ಅಮೂಲ್ಯ ಪ್ರಚಾರ ನಡೆಸಲಿದ್ದಾರೆ.