ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 15ಕ್ಕೆ ನಿಗದಿಪಡಿಸಿದೆ.
ಕಾಯ್ದೆ ಪ್ರಶ್ನಿಸಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕೆಲ ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ಅಡ್ವೋಕೇಟ್ ಜನಲರ್ ಪ್ರಭುಲಿಂಗ ನಾವದಗಿ ಹಾಜರಾಗಿ, ಅರ್ಜಿಗಳ ಅಂತಿಮ ವಿಚಾರಣೆಗೆ ದಿನಾಂಕವನ್ನು ಸೆ.8ರಂದು ನಿಗದಿಪಡಿಸಲಾಗುವುದು ಎಂದು ಆ.26ರಂದು ಹೈಕೋರ್ಟ್ ತಿಳಿಸಿತ್ತು. ಅದರಂತೆ ಅರ್ಜಿಗಳನ್ನು ಅಂತಿಮ ವಿಚಾರಣೆಗೆ ನಿಗದಿಪಡಿಸಬೇಕಿದೆ ಎಂದು ತಿಳಿಸಿದರು.
ಮಧ್ಯಂತರ ಅರ್ಜಿದಾರರೊಬ್ಬರ ಪರ ವಕೀಲರು, ಕಾಯ್ದೆಯನ್ನು ಜಾರಿ ಮಾಡಲು ನಿರ್ದೇಶನ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಅದನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.
ಅದಕ್ಕೆ ಅಡ್ವೋಕೇಟ್ ಜನರಲ್ ಪ್ರತಿಕ್ರಿಯಿಸಿ, ಎಲ್ಲಾ ಅರ್ಜಿಗಳು ಮತ್ತು ಮಧ್ಯಂತರ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ಮಾಡಲಾಗುವುದು ಎಂದು ಹೈಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿತ್ತು ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಒಪ್ಪಿದ ಪೀಠ, ಎಲ್ಲಾ ಅರ್ಜಿಗಳ ಅಂತಿಮ ವಿಚಾರಣೆಯನ್ನು ನ.15ಕ್ಕೆ ನಿಗದಿಪಡಿಸಿ ವಿಚಾರಣೆ ಮುಂದೂಡಿತು.