ಬೆಂಗಳೂರು: ಕೊರೊನಾ ಲಾಕ್ ಡೌನ್ ಪರಿಸ್ಥಿತಿಯಲ್ಲಿ ದಿನವಿಡೀ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ನೆರವಿಗೆ ಮುಂದಾಗುವಂತೆ ಸಂಸದ ಡಿ.ಕೆ. ಸುರೇಶ್ ಮಾಡಿಕೊಂಡಿದ್ದ ಮನವಿಗೆ ಬಮೂಲ್ ಸಂಸ್ಥೆ ಸ್ಪಂದಿಸಿದ್ದು, ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ನೀಡಲು ನಿರ್ಧರಿಸಿದೆ.
ಸಂಸದ ಡಿ.ಕೆ. ಸುರೇಶ್ ಏ.9 ರಂದು ಬಮುಲ್ (ಬೆಂಗಳೂರು ಸಹಕಾರ ಹಾಲು ಒಕ್ಕೂಟ .ನಿ) ಸಂಸ್ಥೆಯ ಆಡಳಿತ ಮಂಡಳಿಗೆ ಪತ್ರ ಬರೆದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಒಳಗೊಂಡಂತೆ ಬಮುಲ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ 3,000 ರೂ. ಪ್ರೋತ್ಸಾಹ ಧನ ನೀಡಲು ಮನವಿ ಮಾಡಿದ್ದರು.
![ಡಿ.ಕೆ. ಸುರೇಶ್](https://etvbharatimages.akamaized.net/etvbharat/prod-images/kn-bng-06-mp-suresh-bamul-script-9020923_15042020193121_1504f_1586959281_257.jpg)
ಸಂಸದರು ಬರೆದ ಪತ್ರದ ಹಿನ್ನೆಲೆಯಲ್ಲಿ ಬಮುಲ್ ಸಂಸ್ಥೆಯು ನಿರ್ದೇಶಕರ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಿಗೆ 3,000 ರೂ. ಸಹಾಯ ಧನ ನೀಡುವ ನಿರ್ಣಯ ಕೈಗೊಂಡಿದೆ. ತಮ್ಮ ಸಲಹೆಗಳನ್ನು ಪುರಸ್ಕರಿಸಿದ್ದಕ್ಕೆ ಬಮೂಲ್ ಸಂಸ್ಥೆ ಆಡಳಿತ ಮಂಡಳಿಗೆ ಸಂಸದ ಡಿ.ಕೆ. ಸುರೇಶ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮವನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಿದ ಬಮುಲ್ ಸಂಸ್ಥೆ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಪ್ರಶಂಸೆ ವ್ಯಕ್ತವಾಗಿದೆ .