ಬೆಂಗಳೂರು : ಸಿಡಿ ಸುಳಿಯಲ್ಲಿ ಸಿಲುಕಿರುವ ಸಹೋದರನ ಪರ ಹೋರಾಟ ಆರಂಭಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಯುವತಿಯಿಂದ ಎರಡನೇ ಸಿಡಿ ಬಿಡುಗಡೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ಅವರು, ಯುವತಿ ಎರಡನೇ ಸಿಡಿ ಬಿಡುಗಡೆ ಮಾಡಿರುವ ಬಗ್ಗೆ ಬಿಎಸ್ವೈ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಸಿಡಿ ಪ್ರಕರಣದ ಕುರಿತು ಎಸ್ಐಟಿ ತನಿಖೆ ಬಗ್ಗೆ ಸಮಾಲೋಚನೆ ನಡೆಸಿದರು. ಆರೋಪಿಗಳು ಮತ್ತು ಯುವತಿ ಇನ್ನೂ ಪತ್ತೆಯಾಗದ ಕುರಿತು ಬೇಸರ ವ್ಯಕ್ತಪಡಿಸಿದರು ಎನ್ನಲಾಗ್ತಿದೆ.
ಓದಿ : ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲ-ಲೋಕಾಯುಕ್ತಕ್ಕೆ ದೂರು
10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದ ಬಾಲಚಂದ್ರ ಜಾರಕಿಹೊಳಿ, ಕಾವೇರಿಯಿಂದ ನಿರ್ಗಮಿಸಿದರು. ಸಿಎಂ ಭೇಟಿ ಬಗ್ಗೆ ಮಾಧ್ಯಮಗಳಿಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಂದು ( ಮಾರ್ಚ್ 25) ಬೆಳಗ್ಗೆಯಷ್ಟೇ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳಿಸುತ್ತೇನೆ, ನನ್ನ ಬಳಿಯೂ ದಾಖಲೆ ಇವೆ ಎಂದಿದ್ದರು. ಇದರ ಬೆನ್ನಲ್ಲೇ ಸಂಜೆ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಎರಡನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ ಎಸ್ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಅಲ್ಲದೆ, ತನ್ನ ಕುಟುಂಬಕ್ಕೆ ರಕ್ಷಣೆ ಕೋರಿದ್ದಾಳೆ. ಈ ಬೆಳವಣಿಗೆ ಬೆನ್ನಲ್ಲೇ ಗೃಹ ಸಚಿವ ಬೊಮ್ಮಾಯಿ ಅವರು, ಯುವತಿ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ಒದಗಿಸಲು ಸರ್ಕಾರ ಬದ್ಧವೆಂದು ಅಭಯ ನೀಡಿದ್ದಾರೆ.