ಬೆಂಗಳೂರು: ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಉದ್ಘಾಟನೆಯಾದ ಬೈಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನ ಛಾವಣಿ ಒಂದೇ ವರ್ಷಕ್ಕೆ ಕುಸಿದು ಬಿದ್ದಿದ್ದು, ಭಾರಿ ಅವಘಡ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಟರ್ಮಿನಲ್ನಲ್ಲಿ ಮಂಗಳವಾರ ಮಧ್ಯಾಹ್ನ ಗಾಳಿ, ಮಳೆಯಿಂದಾಗಿ ಈ ಘಟನೆ ನಡೆದಿದೆ. ಛಾವಣಿ ಕೆಳಗಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ಸೀಲಿಂಗ್ಗೆ ಹಾಕಿದ್ದ ಕೆಲವು ಬೀಮ್‌ಗಳು ಮುರಿದು ಮೇಲ್ಛಾವಣಿಯ ಭಾಗ ಕುಸಿದು ಬಿದ್ದಿದೆ. ಪ್ರವೇಶ ದ್ವಾರದಲ್ಲಿ ಕುಳಿತಿದ್ದ ಸುಮಾರು ಐವತ್ತಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 314 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಕೇಂದ್ರೀಯ ಹವಾನಿಯಂತ್ರಿತ ರೈಲ್ವೇ ನಿಲ್ದಾಣ ಕಳೆದ ವರ್ಷ ಜೂನ್ 6 ರಂದು ಲೋಕಾರ್ಪಣೆಗೊಂಡಿತ್ತು. ಅದೇ ವರ್ಷ ನವೆಂಬರ್‌ನಲ್ಲಿಯೂ ಸಹ ನಿಲ್ಧಾಣದ ಮೇಲ್ಛಾವಣಿ ಕುಸಿದ ಘಟನೆ ವರದಿಯಾಗಿತ್ತು.
ಮಂಗಳವಾರ ಹೌರಾ ಎಕ್ಸ್‌ಪ್ರೆಸ್ ರೈಲು ಸುಮಾರು ಮೂರು ಗಂಟೆಗಳ ಕಾಲ ತಡವಾದಾಗ ಕೆಲ ಪ್ರಯಾಣಿಕರು ಟರ್ಮಿನಲ್‌ನ ಹೊರ ಭಾಗದಲ್ಲಿ ಕಾಯುತ್ತಿದ್ದರು. ಮಳೆ ಪ್ರಾರಂಭವಾದಾಗ ಅವರು ಆಶ್ರಯಕ್ಕಾಗಿ ಟರ್ಮಿನಲ್ ಬಳಿ ನಿಂತಿದ್ದು, ಮೇಲ್ಛಾವಣಿ ಬೀಳಲು ಆರಂಭವಾಗಿದೆ. ಅದೃಷ್ಟವಶಾತ್ ಯಾರ ಮೇಲೆಯೂ ಬಿದ್ದಿಲ್ಲ. ಮಳೆಯಿಂದಾಗಿ ಒಂದನೇ ಪ್ಲಾಟ್‌ಫಾರ್ಮ್ ಸಂಪರ್ಕಿಸುವ ಸುರಂಗ ಮಾರ್ಗ ಮತ್ತು ಪಿಎಫ್ 7 ರವರೆಗಿನ ಎಲ್ಲ ಪ್ಲಾಟ್‌ಫಾರ್ಮ್‌ಗಳು ಜಲಾವೃತವಾಗಿದ್ದು, ಮೋಟಾರ್ ಬಳಸಿ ನೀರನ್ನು ಹೊರ ಹರಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಳೆ ಅವಾಂತರ: ಮರ, ವಿದ್ಯುತ್ ಕಂಬ ಧರೆಗೆ; ಮನೆ, ಅಂಗನವಾಡಿಗೆ ಹಾನಿ