ಬೆಂಗಳೂರು : ನಗರದಲ್ಲಿ ತಡರಾತ್ರಿ ಕನ್ನಡಿಗರಿಗೆ ಸ್ವಲ್ಪವೂ ಕಿಮ್ಮತ್ತು ನೀಡದೇ ಕೆಣಕಿದ ಘಟನೆ ಸಂಬಂಧ ಕೊನೆಗೂ ಪಬ್ ಮ್ಯಾನೇಜರ್ ಕೈಮುಗಿದು ಕ್ಷಮೆಯಾಚಿಸುವ ಮೂಲಕ ಕಾವು ತಣ್ಣಗಾಗಿದೆ. ಶನಿವಾರ ರಾತ್ರಿ ಕೋರಮಂಗಲದ ಬದ್ಮಾಷ್ ಹ್ಯಾಂಗೋವರ್ ಪಬ್ನಲ್ಲಿ ಕನ್ನಡಿಗರಿಗೆ ಅವಮಾನ ನಡೆದಿದೆ ಎನ್ನಲಾಗಿತ್ತು.
ಬರ್ತ್ ಡೇ ಖುಷಿಯಲ್ಲಿದ್ದ ಸಮಿತಾ, ಸಹೋದರ ನಂದಕೀಶೋರ್ ಎಂಬುವರು ತಮ್ಮ ಸ್ನೇಹಿತರ ಜೊತೆ ಬದ್ಮಾಷ್ ಹ್ಯಾಂಗೋವರ್ ಪಬ್ಗೆ ತೆರಳಿದ್ದರು. ರಾತ್ರಿ 9 ರಿಂದ 12:30ರವರೆಗೂ ಒಂದೇ ಒಂದು ಕನ್ನಡ ಹಾಡು ಹಾಕಿ ಅಂದ್ರೂ ಡಿಜೆ.ಸಿದ್ದಾರ್ಥ್ ಮಲ್ಹೋತ್ರಾ ಕಿವಿಕೊಟ್ಟಿಲ್ಲ.
ಯಾಕೆ ಹೀಗೆ ಮಾಡ್ತೀರಾ ಅಂದ್ರೆ - ಇಷ್ಟವಿಲ್ಲದಿದ್ರೆ ಹೊರಗಡೆ ಹೋಗಿ ಅಂತಾ ದರ್ಪದಿಂದ ಮಾತನಾಡಿದ್ದಲ್ದೇ, ನಂದಕೀಶೋರ್ ಕಾಲರ್ ಹಿಡಿದು ಆವಾಜ್ ಹಾಕಿದ್ದಾನಂತೆ.
ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಕನ್ನಡ ಪರ ಸಂಘಟನೆಗಳ ಕೆಲ ಮುಖ್ಯಸ್ಥರು ಆಗಮಿಸಿ ಪಬ್ ವ್ಯವಸ್ಥಾಪಕರ ವಿರುದ್ಧ ಆಕ್ರೋಶ ಹೊರ ಹಾಕಿದರು. ತಕ್ಷಣ ಸ್ಥಳಕ್ಕೆ ಬಂದ ಪಬ್ ಮ್ಯಾನೇಜರ್ ಡೊಮಿನಿಕ್ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ವಾಗ್ದಾನ ಮಾಡಿ ಕನ್ನಡಿಗರ ಕ್ಷಮೆಯಾಚಿಸಿದರು.
ಸದ್ಯ ಯಾವುದೇ ಪ್ರಕರಣ ದಾಖಲಾಗಿಲ್ಲವಾದ್ರೂ ಮ್ಯಾನೇಜರ್ ಕಡೆಯಿಂದ ಕೋರಮಂಗಲ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮ್ಯಾನೇಜರ್ ಕ್ಷಮೆಯಾಚನೆ ಬಳಿಕ ಪರಿಸ್ಥಿತಿ ತಣ್ಣಗಾಗಿದೆ. ಆದ್ರೆ, ಪದೇಪದೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಕನ್ನಡ ನೆಲದಲ್ಲಿ ವ್ಯವಹಾರ ಮಾಡಿ ಜೇಬು ತುಂಬಿಸಿಕೊಳ್ಳೋ ಪಬ್ಗಳಲ್ಲಿ ಕನ್ನಡಿಗರು ಮಾತ್ರವಲ್ಲದೇ ಪ್ರತಿ ಗ್ರಾಹಕರೊಂದಿಗೂ ಸೌಜನ್ಯದಿಂದ ವರ್ತಿಸಬೇಕಿದೆ.