ಬೆಂಗಳೂರು/ಆನೇಕಲ್: ತಮ್ಮನ ಹೆಂಡತಿ ಮೇಲೆ ಮೋಹಗೊಂಡು, ಆಕೆ ನಿರಾಕರಿಸಿದ್ದಕ್ಕೆ ಆಕೆಯ ಮಗುವನ್ನೇ ಕೊಂದ ಅಮಾನವೀಯ ಘಟನೆ ಆನೇಕಲ್ನಲ್ಲಿ ನಡೆದಿದೆ.
ಅಸ್ಸೋಂ ಮೂಲದ ಬಿಮಾಲ್ ಬೋರಾ ಮಗುವನ್ನು ಕೊಂದ ಆರೋಪಿಯಾಗಿದ್ದು, ಈತನ ಸಹೋದರ ಅಸ್ಸೋಂನಲ್ಲೇ ಇದ್ದು, ಬಿಮಾಲ್ ಬೋರಾ ನಾದಿನಿ ಮಗುವಿನ ಜೊತೆ ತಮಿಳುನಾಡಿನ ಪೇರಂಡಪಲ್ಲಿ ಎಂಬಲ್ಲಿನ ಕೋಳಿ ಫಾರ್ಂನಲ್ಲಿ ಕೆಲಸ ಮಾಡಿಕೊಂಡಿದ್ರು. ನಾದಿನಿಯ ಗಂಡ ಕಿರುಕುಳ ನೀಡಿದ ಕಾರಣ ಬಾವ ಬಿಮಲ್ ಹಾಗೂ ಆತನ ಕುಟುಂಬದ ಸಹಾಯದಿಂದ ಆಕೆ ಕೂಡ ಒಂಟಿಯಾಗಿ ಹೇಗೋ ಜೀವನ ಸಾಗಿಸುತ್ತಿದ್ದಳು. ಆದರೆ ಬಾವ ಬಿಮಲ್ ಆಕೆಯನ್ನು ಮಂಚಕ್ಕೆ ಕರೆದು ಪೀಡಿಸುತ್ತಿದ್ದನಂತೆ. ಇನ್ನು ಆಕೆ ಒಂದೂವರೆ ವರ್ಷದ ಮಗುವಿನ ನೆಪ ಹೇಳಿಕೊಂಡು ಆತನಿಗೆ ಪ್ರತಿರೋಧ ಒಡ್ಡುತ್ತಿದ್ದಳು ಎನ್ನಲಾಗಿದೆ.
ಹೀಗಾಗಿ ಕೊನೆಗೂ ಮಗುವಿನ ಮೇಲೆ ಕೋಪಗೊಂಡ ಆರೋಪಿ ಬಿಮಲ್ ಮಗುವಿನ ಕಪಾಳಕ್ಕೆ ಬಿಗಿದು ಕಾಲು ಮುರಿದು ತಾನೇ ಮಗುವನ್ನು ಕಳೆದ ಎರಡು ದಿನದ ಹಿಂದೆ ಹೊಸೂರು ಆಸ್ಪತ್ರೆಗೆ ತಾಯಿಯ ಜೊತೆಗೆ ಹೋಗಿ ಚಿಕಿತ್ಸೆಗೆ ದಾಖಲಿಸುವ ನಾಟಕವಾಡಿದ್ದ. ಆದರೆ ಆಗಲೇ ಮಗು ಸತ್ತಿದ್ದರಿಂದ ತಾಯಿಗೂ ತಿಳಿಸದೆ ಅತ್ತಿಬೆಲೆ ಬಸ್ ಹತ್ತಿದ ಬಿಮಲ್ ಎಟಿಎಂನಲ್ಲಿ ಹಣ ಪಡೆದು ಬರುವೆ ಎಂದು ನೆಪ ಹೇಳಿ, ಮಗುವನ್ನು ಬಟ್ಟೆಯಲ್ಲಿ ಸುತ್ತಿ ಚೆಕ್ಪೋಸ್ಟ್ ಬಳಿ ಮಗುವಿನ ಮೃತದೇಹವನ್ನು ಪೆಟ್ರೋಲ್ ಬಂಕ್ ಹಿಂದೆ ಪೊದೆಯಲ್ಲಿ ಬಿಸಾಡಿ ಪರಾರಿಯಾಗಿದ್ದ. ಹೆತ್ತ ಮಗು ಕಾಣದ ತಾಯಿ ತನ್ನವರಿಂದ ಮಗುವನ್ನು ಹುಡುಕಿಸಿದಾಗ ಪೊದೆಯಲ್ಲಿ ಮಗು ಸತ್ತಿದ್ದನ್ನು ಕಂಡು ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾಳೆ. ಇದೀಗ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಆರೋಪಿ ಬಿಮಲ್ ನ ಪತ್ತೆಗಾಗಿ ಬಲೆ ಬೀಸಿದ್ದಾರೆ.