ಬೆಂಗಳೂರು: ದೇಶದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ಲಭ್ಯವಾಗಬೇಕು ಎಂಬುದು ಮಾಜಿ ಪ್ರ್ರಧಾನಿ ದಿವಂಗತ ಆಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಅವರ ಈ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಾಣಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಾನದ ವತಿಯಿಂದ ಇಂದು ಆಯೋಜಿಸಿದ್ದ ಉತ್ತಮ ಆಡಳಿತ ದಿನಾಚರಣೆ 2023 (ಸುಶಾಸನ ದಿನ) ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಉತ್ತಮ ಆಡಳಿತ ಎಂಬ ಪದವನ್ನೂ ಕೇಳಿರಲಿಲ್ಲ. ಆ ಕುರಿತಂತೆ ಚರ್ಚೆಗಳು ನಡೆಯುತ್ತಿರಲಿಲ್ಲ. ಜೊತೆಗೆ ಜನರಿಗೆ ನಂಬಿಕೆ ಇರಲಿಲ್ಲ. ಆದರೆ, ವಾಜಪೇಯಿ ಅವರ ಆಡಳಿತದ ಬಳಿಕ ಉತ್ತಮ ಆಡಳಿತವನ್ನು ನೋಡಬಹುದಾಗಿತ್ತು. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾಣುವಂತಾಗಿದೆ ಎಂದರು.
ವಿಶ್ವದ ಮುಂದುವರೆದ ದೇಶಗಳಲ್ಲಿ ಉತ್ತಮ ಆಡಳಿತವನ್ನು ಕಾಣುತ್ತಿದ್ದೇವೆ. ಸಾಮಾನ್ಯವಾಗಿ ದೇಶದ ಜನರಿಗೆ ಉತ್ತಮ ಆಡಳಿತ ಅಗತ್ಯವಿದೆ ಎನ್ನಿಸಿದರೂ ಸಹ ನಮ್ಮ ದೇಶದಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿತ್ತು. ದೇಶದಲ್ಲಿ ಆಟಲ್ ಬಿಹಾರಿ ವಾಜಪೇಯಿ ಅವರ ಕಾಲಾವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವಿತ್ತು. ವಿದೇಶಾಂಗ ನೀತಿಗಳು ಅತ್ಯಂತ ಉತ್ತಮವಾಗಿದ್ದು, 25ಕ್ಕೂ ಹೆಚ್ಚು ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು ಎಂದು ವಾಜಪೇಯಿ ಗುಣಗಾನ ಮಾಡಿದರು.
ವಿದೇಶಿ ತತ್ವಜ್ಞಾನಿಯೊಬ್ಬರು ಸ್ವಾಮಿ ವಿವೇಕಾನಂದರ ಕೊಠಡಿಗೆ ಬಂದ ಸಂದರ್ಭದಲ್ಲಿ ಭಗವದ್ಗೀತೆ ಪುಸ್ತಕದ ಮೇಲಿದ್ದ ಬೈಬಲ್, ಕುರಾನ್ ಪುಸ್ತಕಗಳ ಬಗ್ಗೆ ವಿವರಣೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ವಿವೇಕಾನಂದರು ಇಡೀ ಜಗತ್ತಿನ ಭಾರ ಹೊರುವ ಶಕ್ತಿ ಭಾರತಕ್ಕಿದೆ. ಅಂತಹ ಸುಸಂಸ್ಕೃತಿ ನಮ್ಮಲ್ಲಿದೆ ಎಂದಿದ್ದರು.
ಕಳೆದ ಕೆಲ ವರ್ಷಗಳಿಗಿಂತಲೂ ಮುನ್ನ ವಿದೇಶಗಳಲ್ಲಿ ಭಾರತೀಯರು ಎಂದರೆ ಯಾರೂ ತಲೆ ಎತ್ತಿಯೂ ನೋಡುತ್ತಿರಲಿಲ್ಲ. ಆದರೆ, 9 ವರ್ಷಗಳಿಂದೀಚೆಗೆ ಭಾರತ ದೇಶದಲ್ಲಿನ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಆಮೂಲಾಗ್ರ ಬದಲಾವಣೆ ನೋಡಿ ಭಾರತೀಯರು ವಿಶ್ವದ ಎಲ್ಲೆಡೆಯೂ ಹೆಮ್ಮೆಯಿಂದ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ದೇಶದ ಅಭಿವೃದ್ಧಿಗಾಗಿ ತಪಸ್ಸಿನ ಮಾದರಿಯಲ್ಲಿ ಮೋದಿ ಶ್ರಮಿಸುತ್ತಿದ್ದಾರೆ. 2047ರ ವೇಳೆಗೆ ಸಂಪೂರ್ಣ ಬದಲಾವಣೆಯಾಗಲಿದ್ದು, ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಲಿದೆ. ರಾಜಕಾರಣಿಗಳು ಸಾಮಾನ್ಯವಾಗಿ ಚುನಾವಣೆಗೆ ಆಲೋಚನೆ ಮಾಡುತ್ತಾರೆ. ನಮ್ಮ ಪ್ರಧಾನಿ ನಮ್ಮ ದೇಶಕ್ಕೆ ಉತ್ತಮ ಕಾಲವನ್ನು ನಿರೀಕ್ಷೆ ಮಾಡುತ್ತಾರೆ ಎಂದು ಮೋದಿ ಅವರ ಕಾರ್ಯವೈಖರಿಯನ್ನು ವಿಜಯೇಂದ್ರ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಹೆಸರಿನಲ್ಲಿ ಕೆಂಪೇಗೌಡ ಜನಪರ ವೇದಿಕೆ ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಿಕ್ಷಣ ಫೌಂಡೇಶನ್‌ನ CEO ವಿಆರ್ ಪ್ರಸನ್ನ, ಬುಲ್ಫೋರ್ಸ್ ಮತ್ತು ವರ್ಚುವಲ್ ಟೆಕ್ ಹೆಲ್ತ್ ಕ್ಲಿನಿಕ್‌ಗಳ ಸಹ-ಸಂಸ್ಥಾಪಕ ಸುಬ್ರಹ್ಮಣ್ಯ ಬಸವನಹಳ್ಳಿ, ಮಧು ಶೆಟ್ಟಿ, ಹೆಚ್.ಆರ್ ಜಯರಾಮ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಚಿಂತಕರು ಭಾಗವಹಿಸಿದ್ದರು.
ಇದನ್ನೂ ಓದಿ: 'ಸಚಿವ ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ': ಬಿವೈ ವಿಜಯೇಂದ್ರ