ಬೆಂಗಳೂರು : ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುವುದರಿಂದ ಬಿಜೆಪಿಗೆ ಮುಜುಗರವಾಗಲಿದೆ. ಅವರು ಪಕ್ಷ ಬಿಡುತ್ತಾರೋ ಇಲ್ಲವೋ ಅವರಿಗೆ ಬಿಟ್ಟ ವಿಚಾರ. ಆದರೆ, ಆದಷ್ಟು ಬೇಗ ಅವರು ಒಂದು ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಸಲಹೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಟಿ ಸೋಮಶೇಖರ್ ಕಾಂಗ್ರೆಸ್ಗೆ ಹೋಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಒಂದು ಪಕ್ಷದಿಂದ ಆಯ್ಕೆಯಾದ ಮೇಲೆ ಆ ಪಕ್ಷಕ್ಕೆ ನಾವು ಬದ್ಧರಾಗಿರಬೇಕು. ಹಿಂದೆ ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇವೆ. ಹೀಗಾಗಿ ಈ ಪಕ್ಷದಲ್ಲಿ ಗೆದ್ದು ಆ ಪಕ್ಷದವರ ಜೊತೆ ಓಡಾಡೋದು ಸರಿಯಲ್ಲ. ಇದು ಬಿಜೆಪಿಗೂ ಸಹ ಮುಜುಗರ ಉಂಟು ಮಾಡುತ್ತದೆ. ಆದ್ದರಿಂದ ಅವರು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರು ಯಾವ ಪಕ್ಷದಲ್ಲಿದ್ದಾರೆ ಅನ್ನೋ ಅನುಮಾನ ಮೂಡಿಸುತ್ತಿದೆ. ವಿಜಯೇಂದ್ರ ಅವರನ್ನು ರಾಜ್ಯಾದ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಯಡಿಯೂರಪ್ಪ ಅವರಲ್ಲ. ಹೈಕಮಾಂಡ್ ನಾಯಕರು ಆಯ್ಕೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕನಿಗೆ ಸಿಎಂ ಸ್ಥಾನ ಕೊಟ್ಟಿದೆ. ಅಲ್ಲಿನ ಹಿರಿಯ ಘಟಾನುಘಟಿ ನಾಯಕರು, ಮಾಜಿ ಸಿಎಂ ವಸುಂಧರಾ ರಾಜೇ ಅವರು ಅದನ್ನ ಒಪ್ಪಿಕೊಂಡು ಸುಮ್ನೆ ಇದ್ದಾರೆ. ಯತ್ನಾಳ್ ಅವರ ಬದ್ಧತೆ ಯಾರಿಗೆ ಅನ್ನೋದು ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಹೀಗಾಗಿ ಯತ್ನಾಳ್ ಅವರು ಕೂಡ ಪಕ್ಷದ ಹಿತ ದೃಷ್ಟಿಯಿಂದ ಸೈಲೆಂಟ್ ಆಗಿದ್ದರೆ ಒಳ್ಳೆಯದು ಎಂದು ಹೇಳಿದರು.
ಮಾಜಿ ಸಚಿವ ಸೋಮಣ್ಣ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿ ಸಿ ಪಾಟೀಲ್, ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಸಮಸ್ಯೆ ಕೂಡ ಸರಿಯಾಗುತ್ತದೆ. ಎಲ್ಲ ಸರಿಯಾಗುತ್ತದೆ ಅನ್ನೋ ಆಶಾಭಾವನೆ ಇದೆ ಎಂದರು.
ನೀರಾವರಿ ಯೋಜನೆಯೇ ಸ್ಥಗಿತ: ಈ ಸರ್ಕಾರ ಯಾವುದಕ್ಕೂ ಸರಿಯಾಗಿ ಹಣ ಕೊಡ್ತಾಯಿಲ್ಲ. ಯಾವ ಭಾಗ್ಯನೂ ಸಹ ಸರಿಯಾಗಿ ಜಾರಿ ಮಾಡಿಲ್ಲ. ಫಸ್ಟ್ ಒಂದು ತಿಂಗಳ ಹಣ ಮಾತ್ರ ಬಂದಿದ್ದು, ಆಮೇಲೆ ಯಾರಿಗೂ ಸಹ ಹಣ ಬಂದಿಲ್ಲ. ವಿದ್ಯುತ್ ದರ ಡಬಲ್ ಆಗಿದೆ. ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ. ಇಂಥ ಸಂದರ್ಭದಲ್ಲಿ ಎತ್ತಿನಹೊಳೆ ಮಾಡಕ್ಕಾಗಲ್ಲ. ಇರುವ ನೀರಾವರಿ ಯೋಜನೆಯೇ ಸ್ಥಗಿತವಾಗಿದೆ. ಈ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಬಿ ಸಿ ಪಾಟೀಲ್ ಟೀಕಿಸಿದರು.
ವರದಿ ಅವೈಜ್ಞಾನಿಕವಾಗಿದೆ: ಕಾಂತರಾಜ ವರದಿಗೆ ಪರ - ವಿರೋಧ ವಿಚಾರದ ಮಾತು ಕೇಳಿಬರುತ್ತಿದೆ. ಜಾತಿ ಗಣತಿ ಬೇಡ ಅಂತಿಲ್ಲ. ವೈಜ್ಞಾನಿಕವಾಗಿ ಇಲ್ಲ ಅನ್ನೋದು ನಮ್ಮ ಆರೋಪ. ಕೆಲವರ ಸ್ಟೇಟ್ಮೆಂಟ್ ತಗೊಂಡು ವರದಿ ಸಿದ್ದಮಾಡಿದ್ದಾರೆ. ಅನೇಕ ಮನೆಗಳಿಗೆ ತೆರಳಿ ಗಣತಿ ಮಾಡಿಲ್ಲ. ವರದಿ ಅವೈಜ್ಞಾನಿಕವಾಗಿದೆ. ಸರಿಯಾಗಿ ಮಾಡಲಿ ಅನ್ನೋದು ನಮ್ಮ ಆಗ್ರಹ ಎಂದರು.
ಇದನ್ನೂ ಓದಿ : ಡಿಕೆಶಿ ಭೋಜನ ಕೂಟಕ್ಕೆ ಹೋಗಿದ್ದ ಸೋಮಶೇಖರ್ರಿಂದ ಮಾಹಿತಿ ಪಡೆದ ಅಶೋಕ್