ಆನೇಕಲ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಪ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಈಗಾಗಲೇ ಮೂರು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಜಾಮೀನು ಮಂಜೂರಾ ಅಥವಾ ನಿರಾಕರಣೆಯಾಗುತ್ತೆಂಬ ತೀವ್ರ ಕುತೂಹಲ ರಾಜ್ಯದ ಜನರಲ್ಲಿ ಮೂಡಿದೆ. ವಿಶೇಷ ಪ್ರಕರಣವೆಂದು ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಅಂಗೂರ್ ಜಾಮೀನಿಗಾಗಿ ಕಾಯುತ್ತಿದ್ದಾರೆ.
2019 ಅಕ್ಟೋಬರ್ 15 ಅಲಯನ್ಸ್ ಯೂನಿವರ್ಸಿಟಿ ಮೊದಲ ಉಪಕುಲಪತಿಯಾಗಿದ್ದ ಅಯ್ಯಪ್ಪ ದೊರೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ತನಿಖೆ ವೇಳೆ ಅಯ್ಯಪ್ಪ ದೊರೆ ಕೊಲೆಗೆ ಸುಪಾರಿ ನೀಡಿರುವ ವಿಚಾರ ಬಯಲಾಗಿತ್ತು. 2019ರಲ್ಲಿ ಅಲಯನ್ಸ್ ಕುಲಪತಿಯಾಗಿದ್ದ ಸುಧೀರ್ ಅಂಗೂರ್ ಸುಪಾರಿ ನೀಡಿದ್ದಾರೆಂದು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದರು.
ಆನೇಕಲ್ ಅಲಯನ್ಸ್ ವಿಶ್ವವಿದ್ಯಾಲಯದ ಒಡೆತನಕ್ಕಾಗಿ ಹಲವು ವರ್ಷಗಳಿಂದ ಸಂಸ್ಥಾಪಕ ಕುಲಪತಿ ಮಧುಕರ್ ಅಂಗೂರ್ ಮತ್ತು ಸಹೋದರ ಸುಧೀರ್ ಅಂಗೂರ್ ನಡುವೆ ವಿವಾದ ಸದಾ ಜೀವಂತವಾಗಿತ್ತು. ಇದಕ್ಕಾಗಿ ಹಾವು ಏಣಿಯಾಟದಂತಹ ಗದ್ದುಗೆಗಾಗಿ ಗುದ್ದಾಟ ನಡೆದೇ ಇತ್ತು.
ಅಲಯನ್ಸ್ ಯೂನಿವರ್ಸಿಟಿ ಹೋರಾಟದಲ್ಲಿ ಮಧುಕರ್ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದ ಅಯ್ಯಪ್ಪ ದೊರೆಯನ್ನು ಮುಗಿಸಲು ಸುಪಾರಿ ಕಿಲ್ಲರ್ ಸೂರಜ್ ಎಂಬುವವನಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಮೊಬೈಲ್ ಸಂಭಾಷಣೆಗಳ ಆಧಾರದ ಮೇಲೆ ಸುಧೀರ್ ಅಂಗೂರ್ನನ್ನು ಪೊಲೀಸರು ಬಂಧಿಸಿದ್ದರು. ಸುಧೀರ್ ಅಂಗೂರ್ ಪರವಾಗಿ ಖ್ಯಾತ ವಕೀಲ ಬಿ.ವಿ.ಅರ್ಚಾಯ ವಕಾಲತ್ತು ವಹಿಸಿದ್ದಾರೆ.
ಕುತೂಹಲ ಮೂಡಿಸಿದ ಉಪಕುಲಪತಿ ಪ್ರಕರಣದ ಹೈಕೋರ್ಟ್ ತೀರ್ಪು ಹೊರಬೀಳಲಿದೆ. ಪ್ರಕರಣದಲ್ಲಿ ಒಟ್ಟು 14 ಆರೋಪಿಗಳಿದ್ದು, ಮೊದಲನೇ ಆರೋಪಿ ಸುಧೀರ್ ಅಂಗೂರ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.