ಬೆಂಗಳೂರು : ಕೊರೊನಾ ವೈರಸ್ ಈಗ ಜಗತ್ತನ್ನೇ ನಡುಗಿಸುತ್ತಿದೆ. ಈ ಮಹಾಮಾರಿ ಸೋಂಕಿನಿಂದಾಗಿ ಸಾವಿರಾರು ಜನರು ಈಗಾಗಲೇ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇದನ್ನು ತಡೆಯುವಲ್ಲಿ ರೋಗ ನಿರೋಧಕ ಶಕ್ತಿಯನ್ನ ವೃದ್ಧಿಸಿಕೊಳ್ಳುವುದು ಮುಖ್ಯವಾಗಿರುವುದರಿಂದ ಆಯುಷ್ಮಾನ್ ಇಲಾಖೆ ಇದೀಗ ಮತ್ತೆ ಕೆಲ ಸಲಹೆಯನ್ನು ಹಾಗೂ ಇದನ್ನು ಅನುಸರಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದೆ.
ಆಯುಷ್ಮಾನ್ ಇಲಾಖೆಯ ಕೆಲವು ಸಲಹೆಗಳು : ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ದಿನಕ್ಕೆರಡು ಬಾರಿ ಮೂಗಿನ ಹೊಳ್ಳೆಗೆ ಸವರಿಕೊಳ್ಳುವುದು. ಹಾಗೂ 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನ 2-3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು ನಂತರ ಬಿಸಿ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು ಇದನ್ನ ದಿನಕ್ಕೆರೆಡು ಬಾರಿ ಮಾಡಬೇಕು.
ಒಣ ಕೆಮ್ಮು ಹಾಗೂ ಗಂಟಲು ಕೆರೆತವಿದ್ದರೆ : ಪುದಿನ ಎಲೆ ಅಥವಾ ಓಮದಕಾಳುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಅದರ ಹಬೆಯನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳುವುದು. ಹಾಗೂ ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದು.
ರೋಗ ನಿರೋಧಕ ಶಕ್ತಿ ವರ್ಧಿಸುವ ಆರೋಗ್ಯ ಸಲಹೆಗಳು : ದಿನಾ ಬೆಳಗ್ಗೆ ಒಂದು ಚಮಚ ಚ್ಯವನಪ್ರಾಶ ಸೇವಿಸುವುದು ಹಾಗೂ ತುಳಸಿ, ದಾಲ್ಚಿನ್ನಿ, ಕರಿಮೆಣಸು, ಒಣಶುಂಠಿ ಹಾಗೂ ಒಣ ದ್ರಾಕ್ಷಿಗಳನ್ನು ಸೇರಿಸಿ ಕಷಾಯ ತಯಾರಿಸಿ ದಿನಕ್ಕೆ 1 ಅಥವಾ 2 ಬಾರಿ 15-20 ಮಿಲಿ ಕುಡಿಯುವುದು ಹಾಗೂ ಅರಿಶಿನ ಹಾಲು ( ಗೋಲ್ಡನ್ ಮಿಲ್ಕ್) ಅರ್ಧ ಟೀ ಚಮಚ ಅರಿಶಿನ ಪುಡಿಯನ್ನ 150 ಮಿಲಿ ಬಿಸಿ ಹಾಲಿನಲ್ಲಿ ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವುದು.
ಇತರೆ ಸಲಹೆಗಳು : ನಿಯಮಿತವಾಗಿ ಬಿಸಿ ನೀರು ಕುಡಿಯುವುದು ಹಾಗೂ ಪ್ರತಿದಿನ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು. ಅದರಂತೆಯೇ ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು. ಮತ್ತು ಆಯುರ್ವೇದ ಪದ್ಧತಿಯಲ್ಲಿ ಹೇಳಲಾದ ದಿನಚರ್ಯ ಹಾಗೂ ಋತುಚರ್ಯೇಯನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯ ಗಳಿಸಬಹುದು ಎಂದು ಸಲಹೆಯನ್ನು ನೀಡಿದೆ.