ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ನಾನಾ ಕಾರ್ಯ ಕ್ಷೇತ್ರಗಳಲ್ಲಿ ಮಾಡಿದ ಉತ್ತಮ ಸಾಧನೆಗಾಗಿ 2019-20ನೇ ಸಾಲಿನ ಸಮಗ್ರ ದಕ್ಷತಾ ಪ್ರಶಸ್ತಿ ಸೇರಿದಂತೆ 9 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರು ವಿಭಾಗಕ್ಕೆ 2019-20ನೇ ಸಾಲಿನ ಸಮಗ್ರ ದಕ್ಷತಾ ಪ್ರಶಸ್ತಿಯ ಜೊತೆಗೆ ವಾಣಿಜ್ಯ, ವಿದ್ಯುತ್, ಸಿವಿಲ್ ಎಂಜಿನಿಯರಿಂಗ್, ವೈದ್ಯಕೀಯ, ಕಾರ್ಯಾಚರಣೆ, ಸಿಬ್ಬಂದಿ, ಉಗ್ರಾಣ ಮತ್ತು ಉತ್ತಮ ನಿರ್ವಹಣೆ ರೈಲು ನಿಲ್ದಾಣ -(ಕಿರಿಯ)-ನಿಟ್ಟುರು ದಕ್ಷತಾ ಪ್ರಶಸ್ತಿ ದೊರೆತಿದೆ.
ಈ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮ, ಬೆಂಗಳೂರು ವಿಭಾಗದ ಮೂಲ ಸೌಕರ್ಯ ಮತ್ತು ಗೂಡ್ಸ್ ಶೆಡ್‌ಗಳನ್ನು ಸತತವಾಗಿ ನವೀಕರಿಸಲಾಗುತ್ತಿದೆ. ವಿಭಾಗದ ಸರಕುಗಳ ರಾಜಸ್ವವೂ ಕಳೆದ ಸಾಲಿಗಿಂತ ಶೇ. 13.5ರಷ್ಟು ವೃದ್ಧಿಯಾಗಿದೆ. ವಿಭಾಗವು ಕೊವಿಡ್-19 ಸಾಂಕ್ರಾಮಿಕ ಸಂಕಷ್ಟದಲ್ಲಿ ಶ್ರಮಿಕ್ ವಿಶೇಷ ಮತ್ತು ಕಿಸಾನ್ ವಿಶೇಷ ರೈಲು ಸೇವೆಯನ್ನು ನಿರ್ವಹಿಸಿದೆ. ಪ್ರಸ್ತುತ ಸಾಲಿನಲ್ಲಿ ಈವರೆಗೆ ಆಟೋ ಮೊಬೈಲ್ಗಳ ಸಾಗಣೆಗಾಗಿ 62 ಎನ್ಎಂಜಿ ರೈಲುಗಳನ್ನು ನಿರ್ವಹಿಸಿದೆ. ಸರಕು ಸಾಗಣೆಯ ಅನುಕೂಲಕ್ಕಾಗಿ ರೋ-ರೋ ಸೇವೆಯನ್ನು ಆರಂಭಿಸಿದೆ. ವಿಭಾಗದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್ -19 ಸಾಂಕ್ರಾಮಿಕ ಸಂಕಷ್ಟದ ಕಾಲದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸುಸೂತ್ರವಾಗಿ ನಡೆಸಲು ಉತ್ತಮವಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.