ಬೆಂಗಳೂರು: ಹೊಸ ಮನೆ ಹಾಗೂ ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಅಂತ ಪರಿಗಣಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹೊಸ ಮನೆ ಮತ್ತು ಹೊಸ ಮನೆ ಬಾಡಿಗೆದಾರರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಚರ್ಚೆಯಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಯಾರೇ ಹೊಸದಾಗಿ ಮನೆ ನಿರ್ಮಿಸಿದ್ದರೆ ಅಥವಾ ಹೊಸ ಬಾಡಿಗೆದಾರರಲ್ಲಿ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆಯ ದಾಖಲೆ ಇರುವುದಿಲ್ಲ. ಅವರನ್ನು ಯಾವ ರೀತಿ ಪರಿಗಣಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಅವರಿಗೂ ಉಚಿತ ವಿದ್ಯುತ್ ಅನ್ವಯವಾಗಲಿದೆ. ದೇಶದ ಸರಾಸರಿ ಗ್ರಾಹಕರ ವಿದ್ಯುತ್ ಬಳಕೆ 53 ಯೂನಿಟ್ ಆಗಿದೆ. ಹೊಸ ಮನೆ ಹಾಗೂ ಹೊಸ ಬಾಡಿಗೆದಾರರಿಗೆ ಈ 53 ಯೂನಿಟ್ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ಅದರ ಮೇಲೆ 10% ಸೇರಿಸಲಾಗುತ್ತದೆ. ಅದರಂತೆ ಹೊಸ ಮನೆ ಮತ್ತು ಹೊಸದಾಗಿ ಬಾಡಿಗೆಗೆ ಬಂದವರಿಗೆ 58 ಯೂನಿಟ್ ವರೆಗೂ ವಿದ್ಯುತ್ ಉಚಿತ ಸಿಗಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ಒಂದು ವರ್ಷದವರೆಗೂ ಲೆಕ್ಕ ಸಿಗದವರಿಗೆ ಈ ಲೆಕ್ಕ ಅನ್ವಯ ಆಗಲಿದೆ ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.
200 ಯೂನಿಟ್ ಉಚಿತ ವಿದ್ಯುತ್ಗೆ ಷರತ್ತು ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆಯೂ ಸಿಎಂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ನಮ್ಮ ಉಚಿತ ಕೊಡುಗೆ ವಿರುದ್ಧ ಇದ್ದಾರೆ. ಅವರಿಗೆ ಪ್ರಶ್ನೆ ಮಾಡುವ ಹಕ್ಕಿಲ್ಲ. 2022ರ ಏಪ್ರಿಲ್ ತಿಂಗಳಿಂದ 2023ರ ಮಾರ್ಚ್ ತಿಂಗಳ 12 ತಿಂಗಳ ಅವಧಿ ಲೆಕ್ಕಾಚಾರ ಮಾಡಲಿದ್ದೇವೆ. ಹೊಸ ಮನೆಯವರಿಗೆ ಹಂತ ಹಂತವಾಗಿ 200 ಯೂನಿಟ್ ಸಿಗಲಿದೆ ಎಂದರು.
ಮೊದಲು ಮೂರು ಹಂತದಲ್ಲಿ ಸ್ಲಾಬ್ ಇತ್ತು. 200 ಯೂನಿಟ್ ವರೆಗೂ ನಾಲ್ಕು ಹಂತದಲ್ಲಿ ದರ ಇತ್ತು. ಈಗ ಎರಡು ಹಂತದಲ್ಲಿ ಸ್ಲಾಬ್ ಮಾಡಲಾಗಿದೆ. ಈಗ 0-100 ಯೂನಿಟ್ 4.75 ಪೈಸೆ ಆಗಿದೆ. 101 ಮೇಲ್ಪಟ್ಟ ಎಲ್ಲಾ ಯೂನಿಟ್ಗೆ 7 ರೂ. ದರ ಪರಿಷ್ಕರಣೆಯಾಗಿದೆ. ಈ ಹೊರೆ ಯಾವ ಗ್ರಾಹಕರಿಗೂ ಹೋಗ್ತಿಲ್ಲ. ರಾಜ್ಯ ಸರ್ಕಾರವೇ ಭರಿಸಿಕೊಳ್ತಿದೆ. ಯಾರ ಮೇಲೂ ಹೊರೆ ಮಾಡೋದಿಲ್ಲ. ಕೆಇಆರ್ಸಿ ಎರಡು ಹಂತದ ದರ ನಿಗದಿ ಮಾಡಿದೆ. ಹೀಗಾಗಿ ಹಿಂದೆ ಇದ್ದ ನಾಲ್ಕು ಸ್ಲಾಬ್‌ಗೆ ಹೋಗಬಹುದಾ ಅಂತ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಹಿಂದಿನ ರೀತಿ ಮಾಪನಕ್ಕೆ ಹೋಗಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಕನಿಷ್ಠ ದರ ನಿಗದಿ 100 ರಿಂದ 110ರೂಗೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿ, ಅದೂ ಕೂಡ KERC ಮೂಲಕವೇ ಹೆಚ್ಚಳ ಮಾಡಲಾಗಿದೆ. ಸದ್ಯ ಮಳೆ ಕೊರತೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಮಳೆ ಬರಲು ಇನ್ನೂ ಸಮಯ ಇದೆ. ಸೋಲಾರ್ ಮತ್ತು ವಿಂಡ್ ಎನರ್ಜಿ ಬಳಕೆ ಆಗ್ತಿದೆ. ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಆಗಸ್ಟ್ ವರೆಗೂ ಮಳೆ ಬರುವ ನಿರೀಕ್ಷೆ ಇದೆ. ದೇವರ ಮೇಲೆ ಬಾರ ಹಾಕಿದ್ದೇವೆ. ನಮ್ಮ ಇಲಾಖೆಯಲ್ಲಿ ಯಾವುದೇ ಹಣ ಕೇಳಲ್ಲ. ನನ್ನ ಹೆಸರಲ್ಲಿ, ಅಧಿಕಾರಿಗಳ ಹೆಸರಲ್ಲಿ ಹಣ ಕೇಳಿದ್ರೆ ಗಮನಕ್ಕೆ ತನ್ನಿ. ವರ್ಗಾವಣೆಗೂ ಯಾವುದೇ ಹಣ ಕೊಡಬೇಡಿ, ಹಣ ಕೇಳಿದ್ರೆ ನನ್ನ ಗಮನಕ್ಕೆ ತನ್ನಿ ಎಂದು ಸಚಿವ ಜಾರ್ಜ್ ಹೇಳಿದರು.
ಇದನ್ನೂ ಓದಿ: ಬಾಡಿಗೆದಾರರಿಗೂ ಗೃಹಜ್ಯೋತಿ ಉಚಿತ ವಿದ್ಯುತ್.. ತೆರಿಗೆ ಪಾವತಿದಾರರಿಗಿಲ್ಲ ಗೃಹ ಲಕ್ಷ್ಮಿ ಯೋಜನೆ