ಬೆಂಗಳೂರು: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ತರಗತಿಗಳು ಆರಂಭವಾಗಿದ್ದು, ಈ ತರಗತಿಗಳಿಗೆ ಮಕ್ಕಳು ಹಾಜರಾಗುವಂತೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಡಿಡಿಪಿಐ ಮತ್ತು ಬಿಇಒಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿ, ನಮ್ಮ ರಾಜ್ಯದ ಶೇ. 31ರಷ್ಟು ಮಕ್ಕಳಿಗೆ ದೂರದರ್ಶನ ಸೌಲಭ್ಯವೂ ಇಲ್ಲದೇ ಇರುವುದರಿಂದ ಆ ಮಕ್ಕಳಿಗೆ ಅನುಕೂಲವಾಗುವಂತೆ ಸ್ಥಳೀಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ದೂರದರ್ಶನ ಸೌಲಭ್ಯ ಒದಗಿಸಿ ಅಂತಹ ಮಕ್ಕಳಿಗೆ ಚಂದನ ವಾಹಿನಿಯ ಪಾಠಗಳನ್ನು ತಲುಪುವಂತೆ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.
ಸ್ಮಾರ್ಟ್ ಫೋನ್‍ಗಳು ಮತ್ತು ದೂರದರ್ಶನ ವ್ಯವಸ್ಥೆಯೂ ಇಲ್ಲದ ಮಕ್ಕಳಿಗೆ ಸಂವೇದನಾ ತರಗತಿಗಳು ತಲುಪುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಪಾಠ- ಬೋಧನೆಗಳು ಮಕ್ಕಳಿಗೆ ದೊರೆಯಲು ಕ್ರಮ: ಶಾಲಾ ತರಗತಿಗಳು ಭೌತಿಕವಾಗಿ ಆರಂಭವಾಗುವುದು ಇನ್ನೂ ನಿರ್ಧಾರವಾಗಿಲ್ಲವಾದ್ದರಿಂದ ಮಕ್ಕಳ ಕಲಿಕಾ ನಿರಂತರತೆಗೆ ಕ್ರಮ ವಹಿಸಬೇಕಾದ್ದರಿಂದ ಪರ್ಯಾಯ ಬೋಧನೆಗೆ ನಾವು ಹೆಚ್ಚು ಸಕ್ರೀಯವಾಗಬೇಕಿರುವುದರಿಂದ ಇಲಾಖೆಯ ಅಧಿಕಾರಿಗಳು ಪರ್ಯಾಯ ಬೋಧನೆಗೆ ಸ್ಥಳೀಯವಾಗಿ ತಮ್ಮದೇ ಆದ ರೀತಿಯಲ್ಲಿ ಮಕ್ಕಳನ್ನು ತಲುಪಲು ಮತ್ತು ದೂರದರ್ಶನ ವಾಹಿನಿಯ ಪಾಠ- ಬೋಧನೆಗಳು ಮಕ್ಕಳಿಗೆ ದೊರೆಯಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಇದನ್ನೂ ಓದಿ: 'ಮುಂದಿನ ಚುನಾವಣೆಯನ್ನೂ ಯಡಿಯೂರಪ್ಪ ನೇತೃತ್ವದಲ್ಲಿಯೇ ಎದುರಿಸುತ್ತೇವೆ'