ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡಬೇಕು, ಬೌನ್ಸ್ ಕಂಪೆನಿಯ ಎಲೆಕ್ಟ್ರಿಕ್ ಬೈಕ್‌ಗಳಿಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ಸಾರಿಗೆ ಇಲಾಖೆಯ ವಿರುದ್ಧ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಮುಷ್ಕರ ನಡೆಸಿದ್ದಾರೆ.
ಚಾಲಕರು ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಆಟೋ ಮುಷ್ಕರಕ್ಕೆ 21 ಆಟೋ ಚಾಲಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ವಿವಿಧ ಯೂನಿಯನ್‌ಗಳಿಂದ ಸುಮಾರು 10 ಸಾವಿರ ಜನರು ಭಾಗವಹಿಸಿದ್ದರು.
ಪೋಸ್ಟರ್ ಮೂಲಕ ಪ್ರಧಾನಿಗೆ ಮನವಿ: ಪ್ರತಿಭಟನೆಯ ವೇಳೆ ಮಾತನಾಡಿದ ಬೆಂಗಳೂರು ಆಟೋ ಚಾಲಕರ ಮಾಲೀಕರ ಸಂಘದ ಸಂಚಾಲಕ ಮಂಜುನಾಥ್, ಎರಡು ಸಾವಿರ ಆಟೋ ಡ್ರೈವರ್ಗಳು ಪೋಸ್ಟರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಕಳುಹಿಸಲಿದ್ದಾರೆ. ಈ ಕೂಡಲೇ ಇ- ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸಬೇಕು ಎಂದರು.
ಉಪವಾಸ ಸತ್ಯಾಗ್ರಹದ ಬೆದರಿಕೆ: ತಮ್ಮ ಮನವಿಯನ್ನು ಪರಿಗಣಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ. ಇ-ಟ್ಯಾಕ್ಸಿ, ಬೈಕ್, ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸದಿದ್ದರೆ ಬೆಂಗಳೂರಲ್ಲಿ ಒಂದು ಆಟೋ ಕೂಡ ರಸ್ತೆಗಿಳಿಯುವುದಿಲ್ಲ. ಉಪವಾಸ ಸತ್ಯಾಗ್ರಹ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕುಸಿದ ಆಟೋ ಚಾಲಕರ ಆದಾಯ: ರ‍್ಯಾಪಿಡೋ ಆಟೋದಿಂದ ನಮ್ಮ ಆಟೋ ಚಾಲಕರ ಆದಾಯ ಕುಸಿದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಬೆಂಬಲ: ಆಟೋ ಚಾಲಕರ ಮುಷ್ಕರ ಸ್ಥಳವಾದ ಫ್ರೀಡಂ ಪಾರ್ಕ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಚಾಲಕರಿಗೆ ಬೆಂಬಲ ವ್ಯಕ್ತಪಡಿಸಿದರು.
ಕೈ- ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರತಿಭಟನೆ: ಆಟೋ ಮುಷ್ಕರ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಿಎಂಟಿಸಿ ಬಸ್ಗೆ ಚಾಲಕರನ್ನು ಹತ್ತಿಸಲಾಯಿತು. ಆದರೆ ಅಲ್ಲಿಂದ ಇಳಿದು ಪ್ರತಿಭಟನೆ ನಡೆಸಿದ ಆಟೋ ಚಾಲಕರು ಹಾಗೂ ಪೊಲೀಸರ ನಡುವೆ ಗಲಾಟೆ ನಡೆಯಿತು. ಬಸ್ಗೆ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸಿದ ಆಟೋ ಚಾಲಕರು ಮತ್ತು ಪೊಲೀಸರ ನಡುವಿನ ಗಲಾಟೆ ಕೈ- ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಪೊಲೀಸರ ವಿರುದ್ದ ಧಿಕ್ಕಾರ ಘೋಷಣೆ: ಫ್ರೀಡಂ ಪಾರ್ಕ್ ಮತ್ತು ಕಾಳಿದಾಸ ರಸ್ತೆಯಲ್ಲಿ ಪೊಲೀಸ್ ಹಾಗೂ ಆಟೋ ಚಾಲಕರ ನಡುವೆ ವಾಕ್ಸಮರ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಆಟೋ ಚಾಲಕರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಮುಂದಿನ ಅಧಿವೇಶನದಲ್ಲಿ ರಾಜ್ಯ ಹಣಕಾಸು ಪರಿಸ್ಥಿತಿ ಕುರಿತ ಶ್ವೇತಪತ್ರ ಮಂಡನೆ: ಸಿಎಂ