ಬೆಂಗಳೂರು: ಮದುವೆ ಮುಗಿಸಿ ಪರಿಚಯಸ್ಥರ ಮನೆಗೆ ಹೋಗಲು ಹತ್ತಿದ್ದ ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂ.ಮೌಲ್ಯದ 300 ಗ್ರಾಂ ಚಿನ್ನವಿರುವ ಬ್ಯಾಗ್ ಅನ್ನು ಗೋವಿಂದರಾಜನಗರ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಚಿತ್ರದುರ್ಗ ಮೂಲದ ಮಂಜುನಾಥ್ ದಂಪತಿ ಹೊಸೂರಿನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸೋಮವಾರ ರಾತ್ರಿ ಗಾಂಧಿ ನಗರಕ್ಕೆ ಬಂದಿದ್ದರು. ಅಲ್ಲಿಂದ ಬಸವೇಶ್ವರ ನಗರದಲ್ಲಿ ಪರಿಚಯಸ್ಥರ ಮನೆಗೆ ತೆರಳಲು ಪತ್ನಿ ಹಾಗೂ ಸಂಬಂಧಿಕರನ್ನು ಕಾರಿನಲ್ಲಿ ಕಳುಹಿಸಿ ಮಂಜುನಾಥ್ ಹಾಗೂ ಇನ್ನಿಬ್ಬರು ಸೇರಿ ಆಟೋ ಹತ್ತಿದ್ದರು.
ಮುಂಜಾಗ್ರತಾ ಕ್ರಮವಾಗಿ ಪತ್ನಿಯ ಮಾಂಗಲ್ಯ ಸರ ಸೇರಿ ಇನ್ನಿತರ ಆಭರಣವನ್ನು ಬಿಚ್ಚಿಸಿಕೊಂಡು ಬ್ಯಾಗ್ನಲ್ಲಿ ಇಟ್ಟಿದ್ದರು. ಕೆಹೆಚ್ಬಿ ಕಾಲೋನಿ ಆಟೋದಲ್ಲಿ ಇಳಿದು ಬಾಡಿಗೆ ಹಣ ನೀಡಿ ಬ್ಯಾಗ್ ತೆಗೆದುಕೊಳ್ಳದೆ ಮೈ ಮರೆತಿದ್ದಾರೆ. ಇತ್ತ ಚಾಲಕ ಹರೀಶ್ ಎಂಬುವರು ಆಟೋದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿರಲಿಲ್ಲ.
ಆಟೋ ತೆರಳಿ ಕೆಲ ಹೊತ್ತಿನ ಬಳಿಕ ಬ್ಯಾಗ್ ಮಿಸ್ ಆಗಿರುವುದನ್ನು ಜ್ಞಾಪಿಸಿಕೊಂಡ ಮಂಜುನಾಥ್ ಆತಂಕದಿಂದ ದಿಕ್ಕುತೋಚದೆ ಗೋವಿಂದರಾಜ ನಗರ ಠಾಣೆ ಮೆಟ್ಟಿಲೇರಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಇನ್ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತಂಡ ಆಟೋ ಪತ್ತೆಗಾಗಿ ಶೋಧ ನಡೆಸಿದೆ. ಸೆರೆಯಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಟೋ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆಟೋದ ಮೇಲಿದ್ದ ಸಾಯಿಬಾಬಾ ಫೋಟೋ ಇರುವುದನ್ನು ಗಮನಿಸಿದ್ದ ಪೊಲೀಸರು ಸುಮಾರು 15 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅಂತಿಮವಾಗಿ ಗಾಂಧಿ ನಗರದ ಮೂವಿಲ್ಯಾಂಡ್ ಥಿಯೇಟರ್ ಬಳಿ ಆಟೋ ಪತ್ತೆ ಹಚ್ಚಿದ್ದಾರೆ.
ಬ್ಯಾಗ್ ಬಗ್ಗೆ ಚಾಲಕ ಹರೀಶ್ ಪ್ರಶ್ನಿಸಿದಾಗ ಬ್ಯಾಗ್ ವಾಪಸ್ ಮಾಡಲು ಮಾಲೀಕರಿಗಾಗಿ ಶೋಧ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಭರಣ ಪತ್ತೆ ಮಾಡಿ ಹಿಂತಿರುಗಿಸಿದ ಪೊಲೀಸರಿಗೆ ಮಂಜುನಾಥ್ ದಂಪತಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಮರೆತುಹೋಗಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ