ಬೆಂಗಳೂರು: ರಾಬರಿ ಪ್ರಕರಣದಲ್ಲಿ ಜೈಲು ಸೇರಿದ್ದ ಕಳ್ಳತನದ ಆರೋಪಿ ಇತ್ತೀಚೆಗೆ ಜಾಮೀನು ಪಡೆದು, ಆಟೋ ಚಾಲಕನಾಗಿ ಬದುಕು ಕಟ್ಟಿಕೊಂಡಿದ್ದ. ಸುಲಭವಾಗಿ ಹಣ ಸಂಪಾದಿಸಲು ಆಟೋ ಚಾಲಕ ಮತ್ತೆ ಕಳ್ಳತನ ಮಾಡಲು ಹೋಗಿ, ಇದೀಗ ಜೈಲು ಸೇರಿದ್ದಾನೆ. ಆಟೋ ಪ್ರಯಾಣಿಕನ ಬ್ಯಾಗ್ನಲ್ಲಿದ್ದ 1.65 ಲಕ್ಷ ರೂಪಾಯಿ ಲಪಟಾಯಿಸಿದ ಆರೋಪದ ಮೇರೆಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿಜಯನಗರದ ಮೂಡರಪಾಳ್ಯದ ನಿವಾಸಿ ಪವನ್ ಬಂಧಿತ ಆರೋಪಿ. 2021ರಲ್ಲಿ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಕೆಲ ತಿಂಗಳ ಹಿಂದೆ ಜಾಮೀನಿನ ಮೇರೆಗೆ ಹೊರಬಂದು, ಜೀವನ ಸಾಗಿಸಲು ಆಟೋ ಓಡಿಸುತ್ತಿದ್ದ. ನ್ಯಾಯಯುತವಾಗಿ ಆಟೋ ಓಡಿಸಿಕೊಂಡು ಇದ್ದಿದ್ದರೆ ಜೈಲಿಗೆ ಹೋಗುವುದನ್ನು ತಪ್ಪಿಸಬಹುದಾಗಿತ್ತು. ಆದರೆ ಇದೀಗ ಈತ ಹಣದ ಹಿಂದೆ ಬಿದ್ದು, ಕಂಬಿ ಎಣಿಸುತ್ತಿದ್ದಾನೆ.
ಕಳ್ಳತನ ಮಾಡಲು ಸಂಚು: ಉತ್ತರ ಭಾರತ ಮೂಲದ ಮಿಲಿಟರಿ ಅಧಿಕಾರಿಯೊಬ್ಬರು ಕೆಲಸದ ನಿಮಿತ್ತ, ಇದೇ ತಿಂಗಳ 14 ರಂದು ಬೆಂಗಳೂರಿಗೆ ಬಂದಿದ್ದರು. ಕೆಲಸ ಮುಗಿಸಿ ಸಂಜಯನಗರದ ಗಂಗಮ್ಮ ಸರ್ಕಲ್ನಿಂದ ಶಾಂತಿನಗರಕ್ಕೆ ಹೋಗಲು ಆರೋಪಿ ಪವನ್ನ ಆಟೋ ಹತ್ತಿದ್ದರು. ಲಗೇಜ್ ಬ್ಯಾಗ್ ಇರುವುದನ್ನು ಕಂಡ ಪವನ್ ಕಳ್ಳತನ ಮಾಡುವ ಸಂಚು ರೂಪಿಸಿದ್ದಾನೆ.
ಲಗೇಜ್ ಸಮೇತ ಪರಾರಿ: ಇದಕ್ಕೆ ಪೂರಕವೆಂಬಂತೆ ಗಂಗೇನಹಳ್ಳಿ ಬಳಿ ಬಂದಾಗ ಆಟೋ ನಿಲ್ಲಿಸಿ ಅಂಗಡಿಯಲ್ಲಿ ಕುಡಿಯಲು ನೀರು ತೆಗೆದುಕೊಂಡು ಬರುವುದಾಗಿ ಅಧಿಕಾರಿಯು ಹೇಳಿ ಹೋಗಿದ್ದರು. ಇದೇ ಸೂಕ್ತ ಸಮಯ ಎಂದು ಭಾವಿಸಿದ ಆರೋಪಿಯು, ಬಾಡಿಗೆದಾರ ಅಂಗಡಿಗೆ ಹೋಗುತ್ತಿದ್ದಂತೆ ಲಗೇಜ್ ಸಮೇತ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ.
ಇದನ್ನೂ ಓದಿ: ಕೊಳ್ಳೇಗಾಲದ ವ್ಯಾಪಾರಿಗೆ ಮಕ್ಮಲ್ ಟೋಪಿ: ಸ್ಕೂಟರ್ ಡಿಕ್ಕಿಯಲ್ಲಿದ್ದ ₹5 ಲಕ್ಷ ಮಾಯ
ಈ ಸಂಬಂಧ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಸಂಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಬಂಧಿತನಿಂದ 1.65 ನಗದು ಜಪ್ತಿ ಮಾಡಿ ಜೈಲಿಗಟ್ಟಿದ್ದಾರೆ.