ಬೆಂಗಳೂರು: ಔರಾದ್ಕರ್ ವರದಿ ಸಂಪೂರ್ಣ ಜಾರಿ ತರಬೇಕು ಎಂದು ರಾಜ್ಯ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಆಗ್ರಹಿಸಿದ್ದಾರೆ.
ಪೊಲೀಸರ ವೇತನ ಹೆಚ್ಚಳ ಕುರಿತಂತೆ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೀಡಿದ್ದ ವರದಿ ರಾಜ್ಯದಲ್ಲಿ ಜಾರಿಯಾದರೂ ಪೊಲೀಸರ ಮನದಲ್ಲಿ ಅಸಮಾಧಾನದ ಬೆಂಕಿ ಇನ್ನೂ ಆರಿಲ್ಲ. ಇದಕ್ಕೆ ಪ್ರಮುಖ ಕಾರಣ ವರದಿಯಲ್ಲಿರುವ ಅಂಶಗಳು ಎಲ್ಲ ಪೊಲೀಸರಿಗೂ ಅನ್ವಯವಾಗದೇ ಇರುವುದು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.5ರಂದು ಮಂಡಿಸಲಿರುವ ಬಜೆಟ್ನಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ನೀಡುತ್ತಾರೆಯೇ ಎಂಬ ಪ್ರಶ್ನೆ ಪೊಲೀಸ್ ವಲಯದಲ್ಲಿ ಶುರುವಾಗಿದೆ.
ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಪೊಲೀಸರಿದ್ದಾರೆ. ಅಂದಾಜು 20 ರಿಂದ 25 ಸಾವಿರ ಪೊಲೀಸ್ ಹುದ್ದೆಗಳು ಖಾಲಿಯಿವೆ. ಸಾಕಷ್ಟು ಕೆಲಸದೊತ್ತಡದ ನಡುವೆಯೂ ಕಾರ್ಯನಿರ್ವಹಿಸುವ ಪೊಲೀಸರಿಗೆ ವರ್ಗಾವಣೆ ನಿಯಮ ತಲೆ ನೋವಾಗಿ ಪರಿಣಾಮಿಸಿದೆ. ಈ ಹಿಂದೆ ಮೂರು ವರ್ಷಗಳ ಕಾಲ ಒಂದೆಡೆ ಸೇವೆ ಸಲ್ಲಿಸಬೇಕೆಂಬ ನಿಯಮವಿತ್ತು. ಆದರೆ ಈಗ ನಿಯಮಕ್ಕೆ ತಿದ್ದುಪಡಿ ತಂದು ಐದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದ ಪೊಲೀಸರು ತಮ್ಮದಲ್ಲದ ಜಿಲ್ಲೆಗಳಲ್ಲಿ ಐದಾರು ವರ್ಷಗಳವರೆಗೆ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಅಲ್ಲದೆ, ಈಗ ಹೊರಡಿಸಿರುವ ಆದೇಶ ಜಾರಿಯಾಗುವವರೆಗೆ ವರ್ಗಾವಣೆ ತಡೆ ಹಿಡಿಯಲಾಗಿದೆ. ಆದ್ದರಿಂದ ಮೊದಲಿನ ಆದೇಶವನ್ನೇ ಮುಂದುವರಿಸಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ. ರಜೆ ಹಾಗೂ ಭತ್ಯೆಗಳ ವಿಚಾರದಲ್ಲಿ ಸರ್ಕಾರವು ಸಕಾಲಕ್ಕೆ ಸ್ಪಂದಿಸುತ್ತಿಲ್ಲ. ಅಲ್ಲದೆ, ನಿಗದಿಪಡಿಸಿದ ಭತ್ಯೆಯೂ ಯಾವುದಕ್ಕೂ ಸಾಲದಾಗಿದೆ. ಹೀಗಾಗಿ ಪ್ರಯಾಣ ಭತ್ಯೆ, ಹೆಚ್ಚುವರಿ ಡ್ಯೂಟಿ ವೇಳೆ ನೀಡುವ ಭತ್ಯೆ ಹೆಚ್ಚಿಸಬೇಕು ಹಾಗೂ ರಾಜ್ಯ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು ಸೇರಿದಂತೆ ವಿವಿಧ ಅಂಶಗಳ ಬೇಡಿಕೆ ಕುರಿತಂತೆ ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ವೈಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಮುಖ ಬೇಡಿಕೆಗಳು:
*ರಾಘವೇಂದ್ರ ಔರಾದ್ಕರ್ ವರದಿಯನ್ನು ಎಲ್ಲ ಪೊಲೀಸರಿಗೆ ಅನ್ವಯವಾಗುವಂತೆ ಸಮಗ್ರವಾಗಿ ಜಾರಿಗೊಳಿಸಬೇಕು.
*ರಾಜ್ಯ ನೌಕರರ ಪಾಲಿಗೆ ಮರಣ ಶಾಸನವಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು.
* ಎಲ್ಲ ಪೊಲೀಸ್ ಸಿಬ್ಬಂದಿ ಮೂಲ ವೇತನದಲ್ಲಿ ಶೇ.30ರಿಂದ 35ರಷ್ಟು ಹೆಚ್ಚಳ ಮಾಡಬೇಕು.
*ಕಾನ್ಸ್ಟೇಬಲ್ಗಳಿಗೆ ನೀಡುವ ಸಾರಿಗೆ ಭತ್ಯೆಯನ್ನು 600 ರಿಂದ 2,000 ರೂ.ಗೆ ಹೆಚ್ಚಿಸಬೇಕು.