ಬೆಂಗಳೂರು: 1905 ಆಗಸ್ಟ್ 5.. ಈ ದಿನ ಬೆಂಗಳೂರಿಗೆ ವಿಶೇಷ.. ಯಾಕೆಂದರೆ, ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ದೀಪ ಬೆಳಗಿದ್ದು ಇದೇ ಬೆಂಗಳೂರಿನಲ್ಲಿಯೇ.. ಅಂದು ಸರಿಯಾಗಿ 5.30ಕ್ಕೆ ಬೀದಿ ಬದಿಗಳಲ್ಲಿ ಬೆಳಕು ಚೆಲ್ಲಿತ್ತು. ಆಗಿನ್ನೂ ದೆಹಲಿ, ಮುಂಬೈ, ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ ಬೀದಿ ದೀಪಗಳಿರಲಿಲ್ಲ.
ಇತಿಹಾಸಕಾರ ಆರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ಅವರು, ಸಾಮಾಜಿಕ ಜಾಲತಾಣದ ಮೈಸೂರಿನ ಕಥೆಗಳು ಎಂಬ ಫೇಸ್ಬುಕ್ ಪೇಜ್ನಲ್ಲಿ ಈ ಮಾಹಿತಿ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ.
1905ರಲ್ಲಿ ಬೆಳಕು ಬೆಳಗಿದ ಆ ಕಂಬ ಈಗಲೂ ಬಿಬಿಎಂಪಿ ಕಚೇರಿಯ ಆವರಣದಲ್ಲಿದೆ. ಮೊದಲು ಕೆಆರ್‌ಮಾರುಕಟ್ಟೆ ಮುಂಭಾಗದಲ್ಲಿರುವ ಸಣ್ಣ ಗಣಪತಿ ದೇವಸ್ಥಾನದ ಜಾಗದಲ್ಲಿ ಆ ಬೀದಿ ದೀಪದ ವಿದ್ಯುತ್ ಕಂಬ ಇತ್ತು. ಆ ಕಾಲದಲ್ಲಿ ಕೆ ಆರ್ ಮಾರುಕಟ್ಟೆಯೂ ಇರಲಿಲ್ಲ, ದೇವಸ್ಥಾನವೂ ಇರಲಿಲ್ಲ. 1905ರಲ್ಲಿ ಸಿದ್ದಿಕಟ್ಟೆ ಎಂಬ ಸಣ್ಣ ಕೆರೆ ಇತ್ತು. ಅಲ್ಲೇ ರಸ್ತೆಯಲ್ಲಿ ಮೊತ್ತ ಮೊದಲ ಬೀದಿ ದೀಪ ಹತ್ತಿತ್ತು ಎಂದರು.
ಇದರ ಸಂಪೂರ್ಣ ಹೆಗ್ಗಳಿಕೆ, ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಸಲ್ಲಬೇಕು. ಜೊತೆಗೆ ಒಡೆಯರ್ ತಾಯಿ, ಮಹಾರಾಣಿ ವಾಣಿವಿಲಾಸ ಸನ್ನಿಧಾನ ಹಾಗೂ ದಿವಾನ ಶೇಷಾದ್ರಿ ಅಯ್ಯರ್ಗೆ ಈ ಕೀರ್ತಿ ಸೇರಬೇಕು ಎಂದರು.