ಬೆಂಗಳೂರು : ಮೈಸೂರು ಹೊರವಲಯದ ಅಯ್ಯಜ್ಜಯ್ಯನಹುಂಡಿ ಕೆರೆ ಭೂಮಿ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲು ಯತ್ನಿಸಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಹಾಗೂ ಕೆರೆ ಪುನರುಜ್ಜೀವನಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಮೈಸೂರಿನ ಕೆರಗಳ್ಳಿ ಮತ್ತು ಅಯ್ಯಜ್ಜಯ್ಯನಹುಂಡಿ ಕೆರೆಗಳ ಬಫರ್ ಝೋನ್ ಭೂಮಿ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳಾದ ಶಿವಕುಮಾರ್ ಮತ್ತು ಎಂ ಸತೀಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈ ವೇಳೆ ಮೈಸೂರು ಜಿಲ್ಲಾಧಿಕಾರಿ ಸಲ್ಲಿಸಿದ ಕೆರೆಗಳ ಜಾಗದ ಸರ್ವೇ ವರದಿಯನ್ನು ಸರ್ಕಾರದ ವಕೀಲರು ಪೀಠಕ್ಕೆ ಸಲ್ಲಿಸಿದರು.
ಓದಿ:ಅವಕಾಶ ವಂಚಿತ ಸಮುದಾಯಗಳ ಏಳಿಗೆಗೆ ನಿಗಮ ಮಂಡಳಿ ಸ್ಥಾಪಿಸಿದ್ದೇವೆ : ಹೈಕೋರ್ಟ್ಗೆ ಸರ್ಕಾರದ ಸ್ಪಷ್ಟನೆ
ಹಾಗೆಯೇ, ಅಯ್ಯಜ್ಜಯ್ಯನ ಹುಂಡಿ ಕೆರೆಯಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದು ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೇ ಕೆರೆ ಬಫರ್ ಝೋನ್ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲು ಯತ್ನಿಸಲಾಗಿದೆ. ಇನ್ನೂ ಕೆರೆಯ ಜಾಗದಲ್ಲಿಯೇ ರಸ್ತೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಕೆರೆಯನ್ನು ಪುನರುಜ್ಜೀವನಗೊಳಿಸಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ವರದಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಜತೆಗೆ ಕೆರೆ ಪುನರುಜ್ಜೀವನಗೊಳಿಸುವ ಸಂಬಂಧ ಅಧ್ಯಯನ ನಡೆಸಿ ಅಗತ್ಯ ಶಿಫಾರಸು ನೀಡಲು ರಾಷ್ಟ್ರೀಯ ಪರಿಸರ ಸಂಶೋಧನಾ ಸಂಸ್ಥೆ (ನೀರಿ) ನೇಮಕ ಮಾಡುವ ಕುರಿತು ನಿಲುವು ತಿಳಿಸುವಂತೆಯೂ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ಮೈಸೂರಿನ ಹೊರವರ್ತುಲ ರಸ್ತೆ ಬದಿಯಲ್ಲಿ ಅಯ್ಯಜ್ಜಯ್ಯನಹುಂಡಿ ಕೆರೆ ಮತ್ತು ಕೆರಗಳ್ಳಿ ಕೆರೆಗಳಿವೆ. ಅಯ್ಯಜ್ಜಯ್ಯನಹುಂಡಿ ಗ್ರಾಮದ ಸರ್ವೆ ನಂಬರ್ 17ರಲ್ಲಿ 10 ಎಕರೆ 32 ಗುಂಟೆ ವಿಸ್ತೀರ್ಣದ ಕೆರೆ ಇದ್ದರೆ. ಕೆರಗಳ್ಳಿ ಗ್ರಾಮದ ಸರ್ವೆ ನಂಬರ್ 58ರಲ್ಲಿ 9 ಎಕರೆ 9 ಗುಂಟೆ ವಿಸ್ತೀರ್ಣದ ಕೆರೆ ಇದೆ.
ಈ ಎರಡೂ ಕೆರೆಗಳನ್ನು ಕಟ್ಟಡಗಳ ತ್ಯಾಜ್ಯ ಸುರಿದು ಮುಚ್ಚಿ ಬಡಾವಣೆ ನಿರ್ಮಿಸಲಾಗುತ್ತಿದೆ. ಆದ್ದರಿಂದ ಕೆರೆಗಳ ಒತ್ತುವರಿ ತೆರವುಗೊಳಿಸಿ, ಸಂರಕ್ಷಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.