ಬೆಂಗಳೂರು : ವಕೀಲರೊಬ್ಬರ ಕಾರನ್ನು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ ಕಿಡಿಗೇಡಿಗಳು ಅವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಮಾರ್ಚ್ 11ರ ಸಂಜೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಡೆದಿದೆ. ಸಂಜೆ 4:30ರ ಸುಮಾರಿಗೆ ಹುಸೈನ್ ಓವೈಸ್ ಎಂಬವರ ಕಾರನ್ನು ಹಿಂಬಲಿಸಿಕೊಂಡು ಬಂದು ಅಡ್ಡಗಟ್ಟಿದ್ದ ನಾಲ್ವರು ಅಪರಿಚಿತರು ಕಾರಿನ ಗಾಜು ಒಡೆದು, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ವಕೀಲ ಹುಸೈನ್ ಓವೈಸ್, ನಿನ್ನೆ ಸಂಜೆ ನಾಗವಾರದ ಬಿಬಿಎಂಪಿ ಕಚೇರಿಯಲ್ಲಿ ತಮ್ಮ ಕಕ್ಷಿದಾರರೊಬ್ಬರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದೆ. ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಆರೋಪಿಗಳು ನನ್ನನ್ನು ಕಾರು ನಿಲ್ಲಿಸಲು ಸೂಚಿಸಿದರು. ಬಳಿಕ ಅವರು ಯಾರೆಂದು ಗೊತ್ತಿಲ್ಲದ ಕಾರಣ ನಾನು ಕಾರಿನಲ್ಲಿ ಮುಂದೆ ತೆರಳಿದೆ. ಸ್ವಲ್ಪ ದೂರದವರೆಗೆ ಕಾರನ್ನು ಹಿಂಬಲಿಸಿಕೊಂಡು ಬಂದು ಹೆಬ್ಬಾಳ ಮೇಲ್ಸೇತುವೆ ಬಳಿ ಅಡ್ಡಗಟ್ಟಿದರು.
ಈ ವೇಳೆ ಕಾರಿನ ಬಾಗಿಲು ತೆರೆಯುವಂತೆ ಸೂಚಿಸಿದರು. ಆರೋಪಿಗಳ ಕೈಯಲ್ಲಿ ಕಬ್ಬಿಣದ ರಾಡ್ ಇರುವುದನ್ನು ಕಂಡು ಕಾರಿನ ಬಾಗಿಲು ತೆರೆಯಲು ನಿರಾಕರಿಸಿದೆ. ತಕ್ಷಣ ಕಾರಿನ ಕಿಟಕಿ ಗಾಜುಗಳನ್ನು ಒಡೆದು ಪರಾರಿಯಾದರು. ಹಲ್ಲೆ ಮಾಡಿರುವ ಆರೋಪಿಗಳು ಯಾರು ಎಂಬ ಮಾಹಿತಿ ನನಗಿಲ್ಲ. ಆದರೆ ವಕೀಲನಾಗಿ ಅನೇಕ ಪ್ರಕರಣಗಳಲ್ಲಿ ವಕಾಲತ್ತು ವಹಿಸಿರುವ ಮತ್ತು ವಹಿಸುತ್ತಿರುವ ತನಗೆ ಜೀವ ಬೆದರಿಕೆಯಿದೆ. ಆರೋಪಿಗಳನ್ನು ಪತ್ತೆ ಹಚ್ಚುವಂತೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಹುಸೈನ್ ಓವೈಸ್ ತಿಳಿಸಿದರು. ಇತ್ತ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರತ್ಯೇಕ ಪ್ರಕರಣ: ವಾರಾಂತ್ಯದಲ್ಲಿ ಪಾರ್ಟಿಪ್ರಿಯರ ಹಾಟ್ ಸ್ಪಾಟ್‌ಗಳಾದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಅಶೋಕನಗರ ಸೇರಿದಂತೆ ಹಲವೆಡೆ ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್‌ಗಳಲ್ಲಿ ತಡರಾತ್ರಿ ಕೇಂದ್ರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳು, ಮಾದಕ ವಸ್ತುಗಳ ಸೇವನೆಯಂತಹ ಚಟುವಟಿಕೆಗಳ ಮೇಲೆ ಕಣ್ಣಿಡಲು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತಡರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಲಾಗಿದೆ. ಶ್ವಾನದಳ ಸಮೇತ ತೆರಳಿ ಕಾರ್ಯಾಚರಣೆ ನಡೆಸಲಾಗಿದ್ದು ಪ್ರತಿಯೊಂದು ಬಾರ್ ಹಾಗೂ ಪಬ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ.
ಇದೊಂದು ಸಾಮಾನ್ಯ ಪರಿಶೀಲನೆ ಪ್ರಕ್ರಿಯೆಯಾಗಿದ್ದು, ಪಾರ್ಟಿ ನೆಪದಲ್ಲಿ ಮಾದಕ ಸೇವನೆ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದನ್ನು ಪೊಲೀಸರು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಲು ಶ್ವಾನದಳದೊಂದಿಗೆ ತಡರಾತ್ರಿ ಪರಿಶೀಲನೆ ನಡೆಸಲಾಗಿದೆ. ಮಾದಕ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ನಾಲ್ಕು ಪ್ರಕರಣಗಳನ್ನ ದಾಖಲಿಸಲಾಗಿದೆ ಎಂದು ಈಟಿವಿ ಭಾರತ್ ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.
ಇದನ್ನೂ ಓದಿ: ಉದ್ಯಮಿ ಮನೆ ದೋಚಿದ್ದ ಒಡಿಶಾ ಮೂಲದ ಮೂವರ ಕಳ್ಳರ ಬಂಧನ