ಬೆಂಗಳೂರು : ಆಡಳಿತ ಮಂಡಳಿ ಹಾಗೂ ಆಸ್ಪತ್ರೆ ಕಟ್ಟಡದ ಮಾಲೀಕನ ನಡುವಿನ ವ್ಯಾಜ್ಯ ಹಿನ್ನೆಲೆ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಮಾಡಲಾಗಿದೆ. ನಗರದ ಕೆಂಗೇರಿಯ ಮಾತೃ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಹಾಗೂ ಕಟ್ಟಡದ ಮಾಲೀಕನ ನಡುವಿನ ಗಲಾಟೆಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರ ಮೇಲೆ ಹಲ್ಲೆ ನಡೆದಿದೆ. ಕಟ್ಟಡದ ಮಾಲೀಕ ಕಿಶೋರ್ ಕುಮಾರ್ ಹಾಗೂ ಆತನ ಗ್ಯಾಂಗ್‌ನಿಂದ ಹಲ್ಲೆ ಮಾಡಲಾಗಿದೆ.
ಆಸ್ಪತ್ರೆಗೆ ನುಗ್ಗಿ ವೈದ್ಯೆಯ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಮಾತೃ ಆಸ್ಪತ್ರೆಯ ವೈದ್ಯೆ ಜೀಶಾ ಹಾಗೂ ರಶ್ಮಿ ಎಂಬುವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ್ದಲ್ಲದೇ ಆ್ಯಸಿಡ್ ಹಾಕುವುದಾಗಿ ಕೂಡ ಬೆದರಿಕೆ ಹಾಕಿದ್ದಾರೆ.
ಆಸ್ಪತ್ರೆ ಕಟ್ಟಡದ ಮಾಲೀಕರ ಜೊತೆ ಆಡಳಿತ ಮಂಡಳಿಗೆ ಈ ಮೊದಲು ಗಲಾಟೆ ಆಗಿತ್ತು. ಆಸ್ಪತ್ರೆ ಕಟ್ಟಡದ ವಿಚಾರವಾಗಿ ಪದೇಪದೆ ಗಲಾಟೆ ಆಗುತ್ತಾನೆ ಇತ್ತು. ಆದರೆ, ಪ್ರತಿ ಬಾರಿ ಗಲಾಟೆ ನಡೆಯುತ್ತಿದ್ದು, ಈ ಬಾರಿ ಕಟ್ಟಡದ ಮಾಲೀಕ ಕಿಶೋರ್ ಕುಮಾರ್ ಮತ್ತು ಗ್ಯಾಂಗ್‌ನಿಂದ ಏಕಾಏಕಿ ಹಲ್ಲೆ ನಡೆದಿದೆ.
ಈ ಹಿನ್ನೆಲೆ ನಗರ ಪೊಲೀಸ್ ಆಯುಕ್ತರಿಗೆ ವೈದ್ಯರಾದ ಜೀಶಾ ಹಾಗೂ ರಶ್ಮಿ ದೂರು ನೀಡಿದ್ದಾರೆ. ಜೊತೆಗೆ ಕೆಂಗೇರಿ ಠಾಣಾ ಇನ್ಸ್ಪೆಕ್ಟರ್ ವಸಂತ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಾಟೆ ಬಗ್ಗೆ ದೂರು ನೀಡಿದರೂ ದೂರು ಸ್ವೀಕಾರ ಮಾಡ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ, ನಗರ ಪೊಲೀಸ್ ಆಯುಕ್ತರಿಗೆ ಈ ಇಬ್ಬರು ವೈದ್ಯರು ದೂರು ಸಲ್ಲಿಸಿದ್ದಾರೆ.
ಓದಿ: "5Kg ಅಕ್ಕಿ ಸಾಕು" ಎಂಬ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಕತ್ತಿ: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ