ಬೆಂಗಳೂರು: ನಕಲಿ ಅಂಕ ಪಟ್ಟಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಹಾಲಕ್ಷ್ಮಿ ಲೇಔಟ್‌ನ ಶ್ರೀ ವೆಂಕಟೇಶ್ವರ ಇನ್‍ಸ್ಟಿಟ್ಯೂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಪಾರ ಪ್ರಮಾಣದ ನಕಲಿ ಅಂಕ ಪಟ್ಟಿಗಳು ಪತ್ತೆಯಾಗಿದ್ದು, ಆಂಧ್ರಪ್ರದೇಶ ಮೂಲದ ಶ್ರೀನಿವಾಸ್ ರೆಡ್ಡಿ ಎಂಬುವವರನ್ನು ಬಂಧಿಸಿದ್ದಾರೆ.
ಇಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳ ನಕಲಿ ಅಂಕಪಟ್ಟಿಯನ್ನು ಮಾಡಿ ಕೊಡಲಾಗುತಿತ್ತು. ಒಂದು ವಿಷಯಕ್ಕೆ 15 ಸಾವಿರದಿಂದ 3 ಲಕ್ಷದವರೆಗೂ ಹಣ ವಸೂಲಿ ಮಾಡಲಾಗುತಿತ್ತು ಎಂದು ತಿಳಿದು ಬಂದಿದೆ.
ಕಾರ್ಲೆಕ್ಸ್ ಟೀಚರ್ ಯುನಿವರ್ಸಿಟಿ, ನಾರ್ತ್ ಈಸ್ಟ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿಗಳ ಅಂಕ ಪಟ್ಟಿಗಳನ್ನು ಹಣ ತೆಗೆದುಕೊಂಡು ಕೊಡಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ತಂಡ, ಸಾವಿರಾರು ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದೆ. ಈ ಕುರಿತಾಗಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.