ಬೆಂಗಳೂರು: ಹೈಟೆಕ್ ತಂತ್ರಜ್ಞಾನದ ಮೂಲಕ ಎಟಿಎಂಗಳಿಗೆ ಕನ್ನ ಹಾಕ್ತಿದ್ದ ಜಾಲವನ್ನು ಸಂಪಿಗೆಹಳ್ಳಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಗ್ಯಾಂಗ್ನಲ್ಲಿ ಸಕ್ರಿಯಳಾಗಿದ್ದ ಸ್ಟಿಫಾನಿಯಾ ಅಲಿಯಾಸ್ ಖೇಟ್ ಎಂಬ ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಆರೋಪಿ ಮೂಲತಃ ಸ್ಪೇನ್ ದೇಶದವಳು. ಈಕೆ ನಗರದಲ್ಲಿ ಹೊಸ ಬಗೆಯಲ್ಲಿ ಎಟಿಎಂ ಲೂಟಿ ಮಾಡ್ತಿದ್ಳು. ಶಿವರಾಂ ಕಾರಂತ ನಗರದಲ್ಲಿ ಎಸ್ಬಿಐ ಬ್ಯಾಂಕ್ ಮುಂಭಾಗ ಎರಡು ಎಸ್ಬಿಐ ಎಟಿಎಂಗಳಿವೆ. ಇದರ ಒಂದು ಎಟಿಎಂಗೆ ಹಣ ಡ್ರಾ ಮಾಡಲು ಗ್ರಾಹಕರ ಸೋಗಿನಂತೆ ಒಳಗೆ ಹೋಗಿ, ಎಟಿಎಂ ಹಿಂಬದಿಯಲ್ಲಿನ ಕನೆಕ್ಷನ್ ಕಿತ್ತು, ಅಲ್ಲಿ ಅವರು ಪ್ರೊಗ್ರಾಮ್ ಫಿಕ್ಸ್ ಮಾಡಿದ್ದಾರೆ. ಇಲ್ಲಿ ಹೈಟೆಕ್ ಡಿವೈಸ್ ಕನೆಕ್ಟ್ ಮಾಡುತ್ತಿದ್ರು. ಬಳಿಕ ಆ ಡಿವೈಸ್ ರವಾನಿಸುತ್ತಿದ್ದ ಒಟಿಪಿ ಆಧಾರದಲ್ಲಿ ಎಟಿಎಂಗಳಲ್ಲಿನ ಹಣವನ್ನು ಹಂತ ಹಂತವಾಗಿ ಈಕೆ ಎಗರಿಸುತ್ತಿದ್ದಳಂತೆ.
ಇದನ್ನೂ ಓದಿ: ಗದಗನಲ್ಲಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ..
ಇತ್ತೀಚೆಗೆ ಎಸ್ಬಿಐ ಬ್ಯಾಂಕ್ನ ಗ್ರಾಹಕರೊಬ್ಬರು, ಎಟಿಎಂನಲ್ಲಿ 1,500 ರೂಪಾಯಿ ಹಣ ಡ್ರಾ ಮಾಡಿದಾಗ, 1,500 ಬದಲು 1 ಲಕ್ಷ ಹಣ ಬಂದಿತ್ತು. ಕೂಡಲೇ ಶಾಕ್ ಆದ ಬ್ಯಾಂಕ್ ಗ್ರಾಹಕ ಬ್ಯಾಂಕ್ ಮ್ಯಾನೇಜರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ವಿವಿಧ ಕಡೆಗಳಲ್ಲಿನ ತಮ್ಮ ಎಟಿಎಂಗಳನ್ನು ಪರಿಶೀಲಿಸಿದಾಗ, ಒಟ್ಟು18 ಲಕ್ಷ ಹಣ ವ್ಯತ್ಯಾಸವಾಗಿರೋದು ಬೆಳಕಿಗೆ ಬಂದಿದೆ. ಅಲ್ಲದೇ ಕನ್ನ ಹಾಕಲಾದ ಎಟಿಎಂಗಳ ಹಿಂಭಾಗದಲ್ಲಿ ಹೈಟೆಕ್ ಡಿವೈಸ್ ಕನೆಕ್ಟ್ ಮಾಡಿರೋ ವಿಚಾರ ಕೂಡ ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ವಿದೇಶಿ ಲೇಡಿಯ ಕಹಾನಿ ಬೆಳಕಿಗೆ ಬಂದಿದೆ. ಬಂಧಿತೆಯಿಂದ ಪೊಲೀಸರು 20 ಲಕ್ಷ ರೂ. ಹಣ ಜಪ್ತಿ ಮಾಡಿದ್ದಾರೆ.
ಸ್ಟಿಫಾನಿಯಾ ಅಲಿಯಾಸ್ ಖೇಟ್ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿರೋ ಸುಳಿವು ಸಿಕ್ಕಿದೆ. ಹೀಗಾಗಿ ಸಂಪಿಗೆಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.