ಬೆಂಗಳೂರು: ಆಸ್ಟರ್ ಆರ್‌ವಿ ಆಸ್ಪತ್ರೆ ಇತ್ತೀಚೆಗೆ 71 ವರ್ಷದ ವೃದ್ಧೆಗೆ ಅಪರೂಪದ ಮತ್ತು ಕನಿಷ್ಠ ಆಕ್ರಮಣಕಾರಿ ಹೃದಯ ಚಿಕಿತ್ಸೆ ನಡೆಸುವ ಮೂಲಕ ಯಶ್ವಸಿಯಾಗಿದ್ದು, ಹಿರಿಯ ಜೀವಕ್ಕೆ ಹೊಸ ಬದುಕು ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆ ಬಗ್ಗೆ ಆಸ್ಟರ್ ಆರ್‌ವಿ ಆಸ್ಪತ್ರೆಯ ಮುಖ್ಯ ಸಲಹಾತಜ್ಞ ಡಾ.ಎಸ್.ವೆಂಕಟೇಶ್ ಮಾಹಿತಿ ನೀಡಿದ್ದು, ಸಂಧಿವಾತ ಕಾಯಿಲೆಯಿಂದ ಬಳಲುತ್ತಿದ್ದ 71 ವರ್ಷದ ಶೋಭಾ (ಹೆಸರು ಬದಲಾಗಿದೆ) ಎಂಬುವವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ವಿಧಾನವು ಬಹಳ ವಿರಳವಾಗಿದ್ದು, ಇಂತಹದ್ದು ಚಿಕಿತ್ಸೆ ಕರ್ನಾಟಕದಲ್ಲಿ ಎರಡನೆಯ ಬಾರಿ ನಡೆದಿದೆ.
ಅಂದಹಾಗೆ ಈಗಾಗಲೇ ಎರಡು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದ್ದು, ಸಹಜವಾಗಿಯೇ ಮೂರನೇ ತೆರೆದ ಹೃದಯ ಶಸ್ತ್ರಚಿಕಿತ್ಸೆಯು ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ. ಹಾಗೇ ರೋಗಿ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ.
ಶೋಭಾ ಶ್ರಮಪಟ್ಟರೂ ಪದೇ ಪದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇದು ಕವಾಟದ ಕ್ಷೀಣತೆಯ ಸಾಮಾನ್ಯ ಸಂಕೇತವಾಗಿದೆ. 12 ವರ್ಷಗಳ ಹಿಂದೆ ಎರಡನೇ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರಿಗೆ ಬಯೋಪ್ರೊಸ್ಟೆಟಿಕ್ ಟ್ರೈಸ್ಕಪಿಡ್ ವಾಲ್ವ್ ಅಳವಡಿಸಲಾಗಿತ್ತು. ಅದೀಗ ಕ್ಷೀಣಿಸಿದೆ ಎಂದರು.
ಮತ್ತೊಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಪಾಯಕಾರಿ
ಇಂತಹ ರೋಗಿಯಲ್ಲಿ ವಿಶೇಷವಾಗಿ ಅವರ ವಯಸ್ಸು ಮತ್ತು ಸ್ಥಿತಿಗೆ ಅನುಗುಣವಾಗಿ ಹೊಸ ಕವಾಟ ಸರಿಪಡಿಸಲು ಮತ್ತೊಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಅಪಾಯಕಾರಿ. ಕನಿಷ್ಠ ಆಕ್ರಮಣಕಾರಿ ಪೆರ್ ಕ್ಯುಟೇನಿಯಸ್ ವಾಲ್ವ್-ಇನ್-ವಾಲ್ವ್ ಪ್ರಕ್ರಿಯೆಗೆ ಒಳಗಾಗಲು ನಾವು ಸಲಹೆ ನೀಡಿದೆವು ಎಂದರು.
ಹೃದಯದ ಗಾತ್ರವನ್ನು ಅಳೆಯಲು ಮತ್ತು ಹೃದಯ ಅಥವಾ ಶ್ವಾಸಕೋಶದಲ್ಲಿ ಯಾವುದೇ ಹೆಚ್ಚುವರಿ ದ್ರವವಿದೆಯೇ ಎಂದು ಪತ್ತೆಹಚ್ಚಲು ದೈಹಿಕ ಪರೀಕ್ಷೆ, ಇಕೋಕಾರ್ಡಿಯೊಗ್ರಾಂ ಮತ್ತು ಸಿಟಿ ಅರ್ಟೋಗ್ರಾಮ್ ನಡೆಸಲಾಯಿತು.
ಟ್ರೈಕಸ್ಪಿಡ್ ವಾಲ್ವ್ ಅಳವಡಿಕೆ ಯಶಸ್ವಿ
ಜೊತೆಗೆ ಹೃದಯವನ್ನು ಪರೀಕ್ಷಿಸಲು ಮತ್ತು ಯಾವುದೇ ಸಂಭಾವ್ಯ ಹಾನಿಯನ್ನು ನಿರ್ಣಯಿಸಲು ಇತರ ವಿಧಾನಗಳನ್ನು ನಡೆಸಲಾಯಿತು. ವೃದ್ಧೆಗೆ ಅ.11ರಂದು ಕವಾಟ ಅಳವಡಿಕೆಯಲ್ಲಿ ಟ್ರೈಕಸ್ಪಿಡ್ ವಾಲ್ವ್ಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು.
ತೊಡೆಸಂದಿಯಲ್ಲಿ ವೈನ್ ಪಂಕ್ಚರ್ ಮೂಲಕ ಅವರ ಹೃದಯದ ಒಳಹೊಕ್ಕು ಹಿಂದಿನ ಬಯೋಪ್ರೊಸ್ಥೆಟಿಕ್ ಕವಾಟದೊಳಗೆ ಎಂವೈವಿಎಎಲ್ 27.5 ಮಿಮೀ ಟ್ರೈಕಸ್ಪಿಡ್ ಕವಾಟವನ್ನು ಅಳವಡಿಸಿದ್ದೇವೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಒಂದು ಗಂಟೆ ಸಮಯ ಬೇಕಾಗುತ್ತದೆ. ಆ ದಿನವೇ ಅವರನ್ನು ಬಿಡುಗಡೆಗೊಳಿಸಲಾಯಿತು. ಅವರು ಯಾವುದೇ ತೊಂದರೆಯಿಲ್ಲದೆ ಚೇತರಿಸಿಕೊಂಡರು ಎಂದು ಮಾಹಿತಿ ನೀಡಿದರು.
ಶೇ 70 ರಷ್ಟು ರುಮಾಟಿಕ್ ಹೃದಯ ಕಾಯಿಲೆ
ವರದಿಗಳ ಪ್ರಕಾರ, ಭಾರತದಲ್ಲಿ ಕವಾಟದ ಕಾಯಿಲೆಯಿಂದ ಬಳಲುತ್ತಿರುವ ಸುಮಾರು ಶೇ 70 ರೋಗಿಗಳ ಸಮಸ್ಯೆಗೆ ಕಾರಣ ರುಮಾಟಿಕ್ ಹೃದಯ ಕಾಯಿಲೆಯೇ ಆಗಿರುತ್ತದೆ. ಇದು ಬಾಲ್ಯದ ಸ್ಟ್ರೆಪ್ಟೋಕೊಕಲ್ ಸೋಂಕು ಮತ್ತು ಅದರ ಪರಿಣಾಮದಿಂದಾಗಿ ಹೃದಯದಲ್ಲಿನ ಕವಾಟಗಳು ಶಾಶ್ವತವಾಗಿ ಹಾನಿಗೊಳಗಾಗುವ ಸ್ಥಿತಿಯಾಗಿದೆ.
ಹೃದಯ ಕವಾಟದ ಕಾಯಿಲೆಯ ಸಂಭವವು ವಯಸ್ಸಾದಂತೆ ಗಮನಾರ್ಹವಾಗಿ ಹೆಚ್ಚುತ್ತದೆ. ಅಲ್ಲದೇ ದೀರ್ಘಾಯುಷ್ಯ ಹಾಗೂ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಪ್ರಕ್ರಿಯೆಗೆ ಪರಿಣತಿಯ ಅಗತ್ಯವಿರುತ್ತದೆ ಮತ್ತು ವಿಶೇಷ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಇದನ್ನ ಆಸ್ಟರ್ ಆರ್‌ವಿ ವೈದ್ಯರು ಮಾಡಿದ್ದು, ಪೆರ್ಕ್ಯುಟೇನಿಯಸ್ ಕವಾಟಗಳ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ.
ಇದನ್ನೂ ಓದಿ: COVID Update: ರಾಜ್ಯದಲ್ಲಿ 290 ಹೊಸ ಕೇಸ್ ಪತ್ತೆ..10 ಮಂದಿ ಬಲಿ