ಬೆಂಗಳೂರು: ಸಚಿವ ಗೋಪಾಲಯ್ಯ ಅವರ ಮೊಬೈಲ್ ನಂಬರ್ಗೆ ನಿತ್ಯ 500-600 ಕರೆಗಳು ಬರುತ್ತಿವೆ. ನಮ್ಮ ಏರಿಯಾಗೆ ಇನ್ನೂ ಆಹಾರ ಕಿಟ್ ಸಪ್ಲೈ ಆಗಿಲ್ಲ. ಬೇಗ ಕಳಿಸಿಕೊಡಿ. ಈ ನಂಬರ್ಗೆ ಕರೆ ಮಾಡಿದರೆ ಆಹಾರ ಪದಾರ್ಥ ಕಳಿಸಿಕೊಡ್ತೀರಂತಲ್ಲ. ಹೀಗೆ ಹತ್ತು ಹಲವು ಅಹವಾಲು ಹೇಳಿ ಗೋಪಾಲಯ್ಯ ಅವರ ಮೊಬೈಲ್ಗೆ ಅಸಂಖ್ಯಾತ ಕರೆಗಳು ಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೊಬೈಲ್ ಸಂಖ್ಯೆ ಅದು ಹೇಗೋ ವಾಟ್ಸಪ್ಗಳಲ್ಲಿ ಹರಿದಾಡಿದ್ದು, ಅದನ್ನು ಸಹಾಯವಾಣಿ ಕರೆ ಅಂದುಕೊಂಡು ದಿನ ನೂರಾರು ಮಂದಿ ತಮ್ಮ ಕುಂದು ಕೊರತೆ ಹೇಳಿ ಕರೆ ಮಾಡುತ್ತಿದ್ದಾರೆ. ಪ್ರತಿ ನಿಮಿಷಕ್ಕೊಂದರಂತೆ ಕರೆಗಳು ಬರುತ್ತವೆ. ಕರೆ ಮಾಡಿ ನಮಗೆ ಬೇಗ ಆಹಾರ ಪದಾರ್ಥ ಕಳಿಸಿ ಕೊಡ್ರಿ ಅಂತಾ ಕೇಳ್ತಾರೆ. ಕರೆ ಮಾಡುವವರಿಗೆ ನಾನು ಮಂತ್ರಿ ಅನ್ನೋದು ಗೊತ್ತೇ ಇಲ್ಲ. ಯಾವುದೋ ಸಹಾಯವಾಣಿ ಸಂಖ್ಯೆ ಅಂದುಕೊಂಡು ಮಾತನಾಡುತ್ತಾರೆ. ಸಾಧ್ಯವಾದಷ್ಟು ಕರೆಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ಇಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಮೊದಲಿಗೆ ನಿತ್ಯ 600ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು, ಈಗ ಅದು ಸ್ವಲ್ಪ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಸಚಿವರ ಮೊಬೈಲ್ಗೆ ನಿತ್ಯ 300 ಕರೆಗಳು ಬರುತ್ತಿವೆ ಎಂದು ತಿಳಿದು ಬಂದಿದೆ.