ಬೆಂಗಳೂರು: 2022ರ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿರುವ ಅರ್ಜಿಯನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು ಹೈಕೋರ್ಟ್ ಏಕ ಸದಸ್ಯ ಪೀಠಕ್ಕೆ ದ್ವಿಸದಸ್ಯ ಪೀಠ ಮನವಿ ಮಾಡಿದೆ. ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಒಕ್ಕೂಟ ಮತು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಮಾರ್ಚ್ 13 ರಂದು 5 ಮತ್ತು 8ನೇ ತರಗತಿಗಳ ಪರೀಕ್ಷೆಗಳು ನಡೆಯಲಿದ್ದು ಅರ್ಜಿಗಳನ್ನು ಶೀಘ್ರ ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ವಿಚರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸರ್ಕಾರ ಮಾಡುವ ಈ ರೀತಿಯ ಬದಲಾವಣೆಯು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೆ, ಶಾಲಾ ಮಟ್ಟದ ಮೌಲ್ಯಮಾಪನ ಮಾಡುವುದಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಮೂಲಕ ಮೌಲ್ಯಮಾಪನ ಬದಲಾಯಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಕರಣದ ಹಿನ್ನೆಲೆ: 2022-23ನೇ ಶೈಕ್ಷಣಿ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ 23 ರಂದು ಮಧ್ಯಂತರ ಮನವಿಯನ್ನು ತಿರಸ್ಕರಿಸಿತ್ತು. ಅಲ್ಲದೇ, ಸರ್ಕಾರದ ಸುತ್ತೋಲೆಯ ಪ್ರಕಾರ ಈ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೂ ಅದೇ ತರಗತಿಗಳಲ್ಲಿ ಮುಂದುವರೆಸಬೇಕು ಎನ್ನುವ ನಿಯಮ ಇಲ್ಲ. ಜತೆಗೆ, ಸರ್ಕಾರ ಜಾರಿ ಮಾಡಲು ಮುಂದಾಗಿರುವ ನಿಯಮ ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟು ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದರು.
ಟ್ವಿಟರ್ ಖಾತೆಗಳ ನಿರ್ಬಂಧ ವಿಚಾರ: ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಟ್ವಿಟರ್ ಮರುಪರಿಶೀಲನಾ ಸಮಿತಿಯ ಮುಂದೆ ಹಾಜರಾಗಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಹಾಯಕ ಸಾಲಿಸೇಟರ್ ಜನರಲ್ ಆರ್.ಶಂಕರನಾರಾಯಣ್ ಮಾಹಿತಿ ನೀಡಿದರು.
ಅಲ್ಲದೆ, ಟ್ವಿಟರ್‌ನಂಥ ಮಧ್ಯಸ್ಥ ವೇದಿಕೆಗಳ ಜವಾಬ್ದಾರಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇಂಗ್ಲೆಂಡ್ ಮತ್ತು ಭಾರತದಲ್ಲಿನ ಕಾನೂನುಗಳ ವ್ಯತ್ಯಾಸವನ್ನು ಪೀಠಕ್ಕೆ ವಿವರಿಸಲಾಯಿತು. ಆಕ್ಷೇಪಾರ್ಹವಾದ ವಿಚಾರ ಪ್ರಕಟಿಸಿದ್ದಕ್ಕಾಗಿ ಯಾರೆಲ್ಲರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂಬುದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸರ್ಕಾರ ನೀಡಿತು. ಯಾವ ವಿಧಾನದಲ್ಲಿ ಟ್ವಿಟರ್‌ಗೆ ನೋಟಿಸ್ ನೀಡಲಾಗಿದೆ ಎಂಬುದನ್ನೂ ಪೀಠಕ್ಕೆ ವಿವರಿಸಲಾಯಿತು. ಇನ್ನಷ್ಟು ವಿಶ್ಲೇಷಣೆ ಮತ್ತು ವಿವರಣೆ ನೀಡಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಯಿತು.
ಇದನ್ನೂ ಓದಿ: ಮಲ್ಲತ್ತಳ್ಳಿ ಕೆರೆ ಒತ್ತುವರಿ ಮಾಡಿಲ್ಲ, ಶಾಶ್ವತ ಪ್ರತಿಮೆ ನಿರ್ಮಾಣ ಇಲ್ಲ: ಹೈಕೋರ್ಟ್‌ಗೆ ಬಿಬಿಎಂಪಿ ಪ್ರಮಾಣ ಪತ್ರ