ಬೆಂಗಳೂರು: 15ನೇ ವಿಧಾನಸಭೆಯ 10ನೇ ಅಧಿವೇಶನ ಸೆಪ್ಟೆಂಬರ್ 13 ರಿಂದ 24ರ ವರೆಗೆ ನಡೆಯಲಿದ್ದು, ಕಲಾಪ ನಡೆಯುವ ವೇಳೆ ಸಿಎಂ ಒಳಗೊಂಡಂತೆ ಎಲ್ಲಾ ಸಚಿವರು, ಶಾಸಕರು ಕಡ್ಡಾಯವಾಗಿ ಹಾಜರಿರಬೇಕೆಂದು ಮನವಿ ಮಾಡಿರುವುದಾಗಿ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿವೇಶನ ಯಶಸ್ವಿಯಾಗಿ ನಡೆಯಲು ಆಡಳಿತ ಹಾಗೂ ಪ್ರತಿಪಕ್ಷದವರ ಸಹಕಾರ ಕೋರುತ್ತೇನೆ ಎಂದರು.
18 ಬಿಲ್
ಅಧಿವೇಶನದಲ್ಲಿ ಇದುವರೆಗೂ 18 ಬಿಲ್‌ಗಳು ಬಂದಿವೆ. ಅದರಲ್ಲಿ 4 ಪೆಂಡಿಂಗ್ ಇರುವ ಬಿಲ್ ಇವೆ. ಕಾರ್ಯದರ್ಶಿಗಳಿಗೆ ಪತ್ರ ಬರೆದು ಬಿಲ್ ಕಾಪಿ ಕೊಡಲು ಹೇಳಿದ್ದೇನೆ. ನಂತರ ಬರುವ ಬಿಲ್‌ಗಳ ಬಗ್ಗೆ ಏನು ಮಾಡಬೇಕೆಂದು ಸಂಬಂಧಿಸಿದವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಯಾರೂ ಗೈರಾಗಬಾರದು
ಅಧಿವೇಶನ 10 ದಿನ ಇರಲಿದೆ. ಬಜೆಟ್ ಅಧಿವೇಶನದ ಬಳಿಕ ನಡೆಯುತ್ತಿದೆ. ಸದನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ದು, ಸಿಎಂ, ವಿಪಕ್ಷ ನಾಯಕರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಮಾಡಿದ್ದೇನೆ. ಯಾರೂ ಗೈರಾಗದೆ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಸೂಚಿಸಿದರು.
ಸ್ವಯಂ ಜವಾಬ್ದಾರಿ ಸ್ವೀಕರಿಸಬೇಕು. ಕೊರತೆ, ಪ್ರಶ್ನೆ ಕೇಳಲು ಸದಸ್ಯರಿಲ್ಲ, ಉತ್ತರ ನೀಡಲು ಸಚಿವರಿಲ್ಲ ಅನ್ನುವಂತಾಗಬಾರದು. ಯಾವುದೇ ವಿಳಂಬವಾಗಬಾರದು. ಸರ್ಕಾರ ಸ್ಪಂದಿಸಲಿದೆ ಅಂತ ಭಾವಿಸಿದ್ದೇನೆ. ಈ ಬಾರಿ ನಮ್ಮ ವೆಬ್ಸೈಟ್ನಲ್ಲಿ, ಚುಕ್ಕಿ ಗುರುತಿನ ಪ್ರಶ್ನೆ ಮತ್ತು ಇತರೆ ಪ್ರಶ್ನೆಗಳನ್ನು ಅಪ್ ಲೋಡ್ ಮಾಡಲಾಗುವುದು. ಸಾರ್ವಜನಿಕರ ಸೇವೆಗೂ ಪ್ರಶ್ನೆಗಳು ಲಭ್ಯವಿರಲಿವೆ ಎಂದು ಸ್ಪೀಕರ್ ವಿವರಿಸಿದರು.
ಕೊನೆ ದಿನ ಜಂಟಿ ಅಧಿವೇಶನ
ಈ ಸದನದಲ್ಲಿ 24 ರಂದು ಶುಕ್ರವಾರ ಕೊನೆಯ ದಿನ ಮಧ್ಯಾಹ್ನದ ನಂತರ ಸಂಸದೀಯ ಮೌಲ್ಯಗಳ ಕುರಿತು ಜಂಟಿ ಅಧಿವೇಶನ ಮಾಡಲಾಗುವುದು. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ಸೋಮವಾರ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲಾಗುವುದು ಎಂದರು.
ಸರ್ಕಾರದಿಂದ ಮಂಡನೆ/ಅಂಗೀಕಾರಕ್ಕೆ ಸ್ವೀಕರಿಸಿರುವ ವಿಧೇಯಕಗಳು
1. ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021
2. ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಹಾಗೂ ದೃಶ್ಯ ಅಥವಾ ಧ್ವನಿ (ವಿಡಿಯೋ ಅಥವಾ ಆಡಿಯೋ) ಕಳ್ಳಮುದ್ರಕರ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ, 2021.
3. ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021
4. ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021
5. ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021
6. ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ, 2021
7. ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2021
8. ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ, 2021
9. ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, 2021
10. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2021
ಕಳೆದ ಅಧಿವೇಶನದ ನಂತರ ಸರ್ಕಾರದಿಂದ ಹೊರಡಿಸಲಾಗಿರುವ ಅಧ್ಯಾದೇಶಗಳು
- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ, 2021 (2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:04)
ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ಅಧ್ಯಾದೇಶ, 2021 (2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:05 - ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ, 2021 (2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:06)
- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅಧ್ಯಾದೇಶ, 2021 (2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:06)
ವಿಧಾನಸಭೆಯಲ್ಲಿ ಮಂಡನೆಯಾಗಿ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕಗಳು:
- ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ, ಮೀಸಲಾತಿ) (ತಿದ್ದುಪಡಿ) ವಿಧೇಯಕ.
- ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ವಿಧೇಯಕ.
- ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ.