ಬೆಂಗಳೂರು: ರಾಜ್ಯದಲ್ಲಿ ಖಾಸಗಿ-ಅನುದಾನ ರಹಿತ ಪ್ರೌಢ ಶಾಲೆಗಳ ನೋಂದಣಿಗೆ ಅನುಮತಿ ಕೋರಿರುವ ಅರ್ಜಿಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ವಿಲೇವಾರಿ ಮಾಡಿ ಅನುಮತಿ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಅನುದಾನ ರಹಿತ ಪ್ರೌಢ ಶಾಲೆಗಳ ನೋಂದಣಿಗೆ ಈಗಾಗಲೇ ಅರ್ಜಿ ಸಲ್ಲಿಸಿ ವಿವಿಧ ಕಾರಣಗಳಿಗಾಗಿ ಮಾನ್ಯತೆ ತಿರಸ್ಕೃತಗೊಂಡಿದ್ದ ಖಾಸಗಿ ಅನುದಾನ ರಹಿತ ಪ್ರೌಢ ಶಾಲೆಗಳ ಅರ್ಜಿಗಳನ್ನು ಮತ್ತೆ ಪರಿಶೀಲಿಸಲು ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂತೆಯೇ ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯದ ವ್ಯಾಪ್ತಿಗೆ ಬರುವ ಶಾಲೆಗಳಿಗೆ ಸಂಬಂಧಿಸಿದಂತೆ ಕೂಡಲೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲಬುರಗಿ ಮತ್ತು ಧಾರವಾಡ ಜಿಲ್ಲೆಯ ಅಪರ ಆಯುಕ್ತರಿಗೆ ಪತ್ರದ ಮುಖಾಂತರ ಆದೇಶಿಸಲಾಗಿದೆ ಎಂದರು.
ಏಪ್ರಿಲ್ ಮೊದಲ ವಾರದೊಳಗೆ ಧಾರವಾಡ ಮತ್ತು ಕಲಬರಗಿಯ ಖಾಸಗಿ ಅನುದಾನ ರಹಿತ ಪ್ರೌಢ ಶಾಲೆಗಳ ನೋಂದಣಿ ಅನುಮತಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಇದಕ್ಕೂ ಮುನ್ನ ಪ್ರಶ್ನೆ ಕೇಳಿದ್ದ ಅಮರೇಗೌಡ ಪಾಟೀಲ್ ಬಯ್ಯಾಪುರ, ಖಾಸಗಿ ಅನುದಾನ ರಹಿತ ಪ್ರೌಢ ಶಾಲೆಗಳ ನೋಂದಣಿಗೆ ಅನುಮತಿ ನೀಡುವಾಗ ತಿರಸ್ಕರಿಸಲ್ಪಟ್ಟ ಅರ್ಜಿಗಳಿಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಮಾತ್ರ ಅವಕಾಶ ನೀಡಿ. ಕಲಬುರಗಿ ಮತ್ತು ಧಾರವಾಡ ಭಾಗಕ್ಕೆ ಅವಕಾಶ ನೀಡಿಲ್ಲ. ಈ ಭಾಗಕ್ಕೂ ಅವಕಾಶ ನೀಡಬೇಕು. ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ತುರುವೇಕೆರೆ ಸಿ.ಎಸ್.ಪುರದಲ್ಲಿ ಕಾಲೇಜು ಕಟ್ಟಡ ಶೀಘ್ರ ನಿರ್ಮಾಣ:
ತುಮಕೂರು ಜಿಲ್ಲೆ ತುರುವೇಕೆರೆ ಕ್ಷೇತ್ರದ ಸಿ.ಎಸ್.ಪುರ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಕಟ್ಟಡ ಕಾಮಗಾರಿಯನ್ನು ಆದಷ್ಟು ಶೀಘ್ರ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಬಿಜೆಪಿ ಸದಸ್ಯ ಮಸಾಲ ಜಯರಾಮ್ ಅವರ ಪ್ರಶ್ನೆಗೆ ಉತ್ತರಿಸಿದರು.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಅವರ ಪರವಾಗಿ ಸಚಿವ ಸುರೇಶ್ ಕುಮಾರ್ ಉತ್ತರಿಸಿ, ಸಿ.ಎಸ್.ಪುರದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಿಸುವ ಸಂಬಂಧ 100 ಎಕರೆ ಜಮೀನು ಮಂಜೂರಾಗಿದೆ. ಈಗಾಗಲೇ ಆರ್ಟಿಸಿಯನ್ನು ಸಹ ಮಾಡಲಾಗಿದೆ. ಆದಷ್ಟು ಬೇಗ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.
ಸ್ವಂತ ಕಟ್ಟಡ ಇಲ್ಲದ ಕಾರಣ 112 ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 2021-22ನೇ ಸಾಲಿನಲ್ಲಿ ಕೋವಿಡ್‍ನಿಂದಾಗಿ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡಿಲ್ಲ. ಕ್ರಿಯಾ ಯೋಜನೆ ರೂಪಿಸಿ ಕಟ್ಟಡ ಕಾಮಗಾರಿಯನ್ನು ಲಭ್ಯತೆ ಆಧಾರದ ಮೇಲೆ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಶಾಸಕ ಪರಣ್ಣಮುನವಳ್ಳಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಂಗಾವತಿ ತಾಲೂಕಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳಲಾಗುವುದು. ಇಲ್ಲಿ ಸಿಬ್ಬಂದಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಭರ್ತಿ ಮಾಡುವುದಾಗಿ ಭರವಸೆ ನೀಡಿದರು.